

ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ವಿವರ
ಶ್ರೀರಂಗಪಟ್ಟಣ : ತಾಲೂಕಿನ ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಹಸಿರಲೆ ಬಿತ್ತನೆ ಬೀಜ(ಅಪ್ಸೆಣಬು) ದೊರೆಯುತ್ತಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಖರೀದಿಸಿ ವ್ಯವಸಾಯದಲ್ಲಿ ಬಳಕೆ ಮಾಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಈಗಾಗಲೇ ಭತ್ತದ ಬೆಳೆ ಕಟಾವು ಮಾಡಲಾಗುತ್ತಿದೆ. ಇಲಾಖೆ ಹಸಿರೆಲೆ ಬಿತ್ತನೆ ಬೀಜಗಳನ್ನು ಅರಕೆರೆ, ಕಸಬಾ, ಕೆ.ಶೆಟ್ಟಹಳ್ಳಿ ಹಾಗೂ ಬೆಳಗೊಳ ಹೋಬಳಿಗಳ 4 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿದೆ. ರೈತರು ಆಧಾರ್ ಹಾಗೂ ಪಹಣಿ ಪತ್ರ ದಾಖಲೆ ತೋರಿಸಿ ಹಸಿರೆಲೆ ಬೀಜಗಳನ್ನು ಖರೀದಿಸಿ ಜಮೀನುಗಳಲ್ಲಿ ಬಿತ್ತನೆ ಮಾಡಿ 40 ದಿನದ ನಂತರ ಉಳುಮೆ ಮಾಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೋಷಕಾಂಶ ವೃದ್ಧಿಗೆ ಪೂರಕ:
ಸಾಮಾನ್ಯವಾಗಿ ಗದ್ದೆಗಳಲ್ಲಿ ಭತ್ತದ ಫಸಲು ಬಳಿಕ ಪುನಃ ಭತ್ತವನ್ನೇ ಬೆಳೆಯುವ ಪದ್ಧತಿ ಇದೆ. ಈ ಸಂದರ್ಭ ಮಣ್ಣಿನಲ್ಲಿ ಪೋಷಕಾಂಶ ಕಡಿಮೆಯಾಗಿರುತ್ತದೆ. ರೈತರು ಸೊಸೈಟಿ ಗೊಬ್ಬರದ ಜತೆಗೆ ಹಸಿರಲೆ(ಅಪ್ಸೆಣಬು)ಗೊಬ್ಬರವನ್ನು ನೀಡಿ ಮಣ್ಣಿನ ಪೋಷಕಾಂಶ ವೃದ್ಧೊಗಿಳಿಸಬೇಕು ಎಂದು ತಿಳಿಸಿದ್ದಾರೆ.
ಬಿತ್ತನೆ ಸಮಯಕ್ಕೆ ಈಗ ಇಲಾಖೆಯಲ್ಲಿ ಅಲಸಂದೆ ಕಾಳು ಲಭ್ಯವಿದೆ. ಖಾಲಿ ಜಮೀನುಗಳನ್ನು ಹೊಂದಿರುವವರು ಅಲಸಂದೆ ಹಾಕಿ ಕಾಳುಗಳಾಗಿ ಅಥವಾ ಹಸಿರೆಲೆ ಬಿತ್ತನೆ ಬೀಜಕ್ಕೂ ಬಳಸಿಕೊಳ್ಳಬಹುದು. ಮುಂದಿನ ಹವಾಮಾನಕ್ಕೆ ತಕ್ಕಂತೆ ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್ ಮತ್ತು ಜಿಪ್ಸಂ ಸಬ್ಸಿಡಿ ರೂಪದಲ್ಲಿ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲೂ ದೊರೆಯಲಿದೆ ಎಂದು ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ. ಟಾರ್ಪಲ್ ಲಭ್ಯ: ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ಯಾವುದೇ ಬೆಳೆ ಹಾನಿ ಸಂಭವಿಸಿಲ್ಲ. ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಟಾರ್ಪಲ್ ಲಭ್ಯವಿದೆ. ಒಕ್ಕಣೆ ಮಾಡುವ ರೈತರಿಗೆ ಅಗತ್ಯ ಇದ್ದಲ್ಲಿ ಆಧಾರ್ ಹಾಗೂ ಪಹಣಿ ದಾಖಲೆ ಸಲ್ಲಿಸಿ ಟಾರ್ಪಲ್ ಖರೀದಿಸಬಹುದು.
ಸಬ್ಸಿಡಿ ದರದಲ್ಲಿ ಕಟಾವು, ನಾಟಿ ಯಂತ್ರ: ಭತ್ತ ಕಟಾವು ಮಾಡಿಸಲು ತಮಿಳುನಾಡಿನ ಭತ್ತ ಕಟಾವು ಮಾಡುವ ಬೃಹತ್ ಯಂತ್ರಗಳಿಗೆ ಹಲವರು ಮೊರೆ ಹೋಗುತ್ತಿದ್ದಾರೆ. ಅವರು ರೈತರಿಂದ ಪ್ರತಿ ಗಂಟೆಗೆ ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆ ಈಗ ವಿವಿಧ ಯೋಜನೆಯಲ್ಲಿ 36 ಲಕ್ಷ ರೂ. ವೆಚ್ಚದ ಭತ್ತ ಕಟಾವು ಮಾಡುವ ಯಂತ್ರವನ್ನು ನೀಡುತ್ತಿದೆ. ಇದಕ್ಕೆ 11.5 ಲಕ್ಷ ರೂ. ಸಬ್ಸಿಡಿ ಲಭಿಸಲಿದೆ. ಆಸಕ್ತರು ಅಥವಾ ಸಂಘ ಸಂಸ್ಥೆ ಮತ್ತು ಸೊಸೈಟಿಗಳು ಈ ಯಂತ್ರ ಖರೀದಿಸಿ ತಾಲೂಕು, ಜಿಲೆ ಗಳಲ್ಲಿ ಉದ್ಯಮ ಪ್ರಾರಂಭಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.
ಯಂತ್ರ, ಚಾಲಕ ಹಾಗೂ ರಿಪೇರಿ ತರಬೇತಿಯನ್ನೂ ಇಲಾಖೆ ಸಹಯೋಗದೊಂದಿಗೆ 6 ತಿಂಗಳಕಾಲ ನೀಡಲಾಗುತ್ತಿದೆ. ಭತ್ತದ ನಾಟಿ ಯಂತ್ರಗಳೂ ಕೃಷಿಕರಿಗೆ ಲಭ್ಯವಿದೆ. 3.7ಲಕ್ಷ ರೂ. ಬೆಲೆಯ ಯಂತ್ರಕ್ಕೆ ಶೇ. 50 ಸಬ್ಸಿಡಿ ದೊರಕಲಿದೆ. ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಇಲಾಖೆಗೆ ಸಂಪರ್ಕಿಸಿ ಅಗತ್ಯ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ.
ಮಿಶ್ರ ಬೆಳೆಗೆ ಆದ್ಯತೆ ನೀಡಬೇಕು: ಕೃಷಿಕರು 1 ವರ್ಷ ಅವಧಿಗೆ ಬೆಳೆಯುವ ಕಬ್ಬು ಬೆಳೆಯಲ್ಲಿಒಂದು ಸಾಲಿನಿಂದ ಮತ್ತೊಂದು ಸಾಲಿನ ನಡುವೆ 3 ಅಡಿ ಬದಲು 5 ಅಡಿ ಅಂತರ ಬಿಡಬೇಕು. ಅಂತರ ಹೆಚ್ಚಿಸುವುದರಿಂದ ಕಳೆಯನ್ನು ಸುಲಭವಾಗಿ ಕೀಳಬಹುದು.ಕಬ್ಬಿನ ತೆಂಡೆಯು ವಿಸ್ತಾರವಾಗಿ ತೆರದು ಅಧಿಕ ಇಳುವರಿ ದೊರಕಲು ಇದು ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಕಬ್ಬು ಕಡಿಯುವ ಯಂತ್ರಗಳೂ ಕೃಷಿ ರಂಗಕ್ಕೆ ಬರಲಿವೆ. 5 ಅಡಿಗಳ ಅಂತರದಲ್ಲಿ ಗಿಡಗಳು ಇದ್ದರೆ ಕಟಾವು ಮಾಡಲು ಸುಗಮವಾಗಲಿದೆ ಎಂದು ಪ್ರಿಯದರ್ಶಿನಿ ಸಲಹೆ ನೀಡಿದ್ದಾರೆ. ಕಬ್ಬಿನ ಬೆಳೆ ನಡುವೆ ಲಭ್ಯವಿರುವ ಖಾಲಿ ಜಾಗದಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ಮಿಶ್ರ ಬೇಸಾಯ ಮಾಡಬೇಕು. ಇದರಿಂಧ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ವಾಡಿಕೆಗಿಂತಲೂ ಅಧಿಕ ಮಳೆ
ತಾಲೂಕಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಸುರಿಯುತ್ತಿದೆ. ಏಪ್ರಿಲ್‌ನಲ್ಲಿ ನಿರೀಕ್ಷೆ ಮಾಡಿದ್ದ 46.9 ಮಿ.ಮೀ. ಗಿಂತ ಪ್ರಸ್ತುತ 73.5 ಮಿ. ಮೀ. ಮಳೆ ಸುರಿದಿದೆ. ಈ ಹವಾಮಾನದಲ್ಲಿ ಖಾಲಿ ಜಮೀನುಗಳಲ್ಲಿ ಅಲಸಂದೆ ಕಾಳನ್ನು ಉತ್ತಮವಾಗಿ ಬೆಳೆಯಬಹುದು. ಹವಾಮಾನ ಮುನ್ಸೂಚನೆಯಂತೆ ಮೇ ಅಂತ್ಯಕ್ಕೆ 40.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಿಯದರ್ಶಿನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.