

ಶ್ರೀ ಜನ್ಮಾಂಜನೇಯ ಸ್ವಾಮಿಗೆ ವಿಶೇಷ ಪೂಜೆ- ಶ್ರೀ ಹರಿಪ್ರಿಯತೀರ್ಥ ಸ್ವಾಮೀಜಿ ಸಾನ್ನಿಧ್ಯ
ತಿ. ನರಸೀಪುರ: ಶ್ರೀ ವ್ಯಾಸರಾಜ ಗುರು ಸಾರ್ವಭೌಮರ 577 ನೇ ವರ್ಧಂತಿ ಮಹೋತ್ಸವವನ್ನು ವ್ಯಾಸರಾಜರ ಜನ್ಮಸ್ಥಾನವಾದ ಬನ್ನೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲಗ್ಗೇರಿ ಶ್ರೀ ರಾಘವೇಂದ್ರ ಆಶ್ರಮದ ಶ್ರೀ ಹರಿಪ್ರಿಯತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡಿದರು. ವೇದಾಂತ ಸಾಮ್ರಾಜ್ಯಕ್ಕೆ , ದಾಸ ಸಾಹಿತ್ಯ ಪ್ರವರ್ಧನೆಗೆ ಮತ್ತು ಕನ್ನಡ ನಾಡಿಗೆ ಶ್ರೀ ವ್ಯಾಸರಾಜರ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು. ವ್ಯಾಸರಾಜರ ಜೀವನ , ಸಾಧನೆ ಮತ್ತು ಬೋಧನೆಗಳನ್ನು ಅನುಸರಿಸಬೇಕು. ಅವರ ಗ್ರಂಥಗಳನ್ನು ನಿರಂತರವಾಗಿ ಅಧ್ಯಯನ ಮಾಡುವ, ಪ್ರವಚನದ ಮೂಲಕ ಸಾರ ಸಂದೇಶ ತಿಳಿಸುವ ಕೆಲಸವಾಗಬೇಕು. ಯುವ ವಿದ್ವಾಂಸರು ವ್ಯಾಸರಾಜರ ಕೃತಿಗಳ ಮಹತ್ವ ತಿಳಿಯಬೇಕು. ಅವರ ಅವತಾರದ ಉದ್ದೇಶ ಮತ್ತು ಮಹೋನ್ನತ ಕೊಡುಗೆಗಳನ್ನು ಅವಲೋಕನ ಮಾಡಬೇಕು. ಆಗ ಮಾತ್ರ ಅವರ ವರ್ಧಂತಿ ಆಚರಿಸಿದ ಸಾರ್ಥಕತೆ ದೊರಕುತ್ತದೆ ಎಂದು ಅವರು ಹೇಳಿದರು.
ವಿಶೇಷ ಪೂಜೆ: ಶ್ರೀ ನರಹರಿ ತೀರ್ಥರು ಪೂಜಿಸಿದ ಸಂಸ್ಥಾನ ಪ್ರತಿಮೆಗಳು ಮತ್ತು ಶ್ರೀ ಜನ್ಮಾಂಜನೇಯ ಸ್ವಾಮಿಗೆ ಇದೇ ಸಂದರ್ಭ ಸ್ವಾಮೀಜಿ ಫಲ ಪಂಚಾಮೃತ ಅಭಿಷೇಕ ಮಾಡಿದರು. ಮೈಸೂರಿನ ಮಧುಸೂದನ ಮತ್ತು ವೃಂದದವರು ಪುಷ್ಯಾರ್ಕ ಯೋಗದ ಪ್ರಯುಕ್ತ ಶ್ರೀ ಹರಿವಾಯು ಸ್ತುತಿ ಪುನಶ್ಚರಣ ಸೇವೆ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಮಾಡಿದರು. ಹನುಮಂತ ರಾಜು ಮತ್ತು ವೃಂದದವರ ವಾದ್ಯಮೇಳ ರಂಜಿಸಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ.ಗುರುರಾಜ ಅವರು ಶ್ರೀ ವ್ಯಾಸರಾಜರ ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಬೆಂಗಳೂರಿನ ಅನಿರುದ್ಧ ಮತ್ತು ಅಮಿತ ಚತುರ್ವೇದ, ಶ್ರೀ ಚಂದ್ರಿಕಾ ಗ್ರಂಥದ ಪಾರಾಯಣ ನಡೆಸಿಕೊಟ್ಟರು. ನಂತರ ನೆರೆದಿದ್ದ ನೂರಾರು ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಫಲ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.