

ವಿಜಯವಾಣಿ ಸುದ್ದಿಜಾಲ ಗದಗ
ನಮ್ಮ ಪರಂಪರೆ ಎಂದಿಗೂ ಮರೆಯಬಾರದು. ಭರತ ಭೂಮಿ ಎಂದೆಂದಿಗೂ ಅಸ್ತಿತ್ವದಲ್ಲಿರುತ್ತದೆ. ಹಲವು ಮಹನೀಯರ ತ್ಯಾಗದ ಫಲವಾಗಿ ಸಂಘ ಇಂದು ಉತ್ತಮವಾಗಿ ಬೆಳೆದಿದೆ ಎಂದು ಶ್ರೀ ವಿಮಲಸಾಗರ ಸೂರೀಶ್ವರಜೀ ಮಹಾರಾಜ ಹೇಳಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಆರೆಸ್ಸೆಸ್ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಸಂಘ ಯಾವತ್ತಿಗೂ ಶಾಂತಿ ಮತ್ತು ರಾಷ್ಟ್ರ ರಕ್ಷಣೆಯನ್ನೇ ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡಿದೆ. ಪ್ರತಿಯೊಬ್ಬರೂ ಮೊದಲು ರಾಷ್ಟ್ರಕ್ಕೆ ಮಹತ್ವ ನೀಡಬೇಕು ಎಂದು ತಿಳಿಸಿದರು.
ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ನಾಗೇಶ ಚಿನ್ನಾರೆಡ್ಡಿ ಮಾತನಾಡಿ, ವಸುದೈವ ಕುಟುಂಬಕಂ ಎಂಬ ಮೌಲಿಕ ತತ್ವವನ್ನು ಸಂಘ ತನ್ನ ಕಾರ್ಯ ಪದ್ಧತಿಯಲ್ಲಿ ಜೀವಂತವಾಗಿಟ್ಟುಕೊಂಡಿದೆ. ಜೀವನದಲ್ಲಿ ದಯೆ ಹಾಗೂ ಗೌರವದ ಮನೋಭಾವನೆ ಬೆಳೆಸಬೇಕು. ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರ ಗೌರವದ ಮೂಲಕ ಸಂಘ ಸಮಾಜದ ಹಿತಾಸಕ್ತಿಗಾಗಿ ಶ್ರಮಿಸುತ್ತಿದೆ. ಎಲ್ಲರೂ ಇವುಗಳನ್ನು ಅಳವಡಿಸಿಕೊಂಡು ರಾಷ್ಟ್ರ ಸೇವೆ ಮಾಡಬೇಕು ಎಂದರು. ನಗರ ಸಂಘ ಚಾಲಕ ಬಸವರಾಜ ನಾಗಲಾಪೂರ, ಮಾರುತಿ ಕಟ್ಟಮನಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಎಂ.ಎಸ್. ಕರಿಗೌಡ್ರ, ಜಿಲ್ಲಾ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಕುರುಡಗಿ, ಅಶೋಕ ನವಲಗುಂದ ಸೇರಿದಂತೆ ಅನೇಕರ ಹಿರಿಯರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗದಗ ನಗರ ಘಟಕದಿಂದ ವಿಜಯದಶಮಿ ಅಂಗವಾಗಿ ಭಾನುವಾರ ಜರುಗಿದ ಶಿಸ್ತು ಬದ್ಧ ಗಣವೇಷಧಾರಿಗಳ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಪಥ ಸಂಚಲನ ನಿಮಿತ್ತು ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಸ್ವಚ್ಛಗೊಳಿಸಿ ಸುಂದರ ರಂಗೋಲಿ ಬಿಡಿಸಲಾಗಿತ್ತು. ಮಕ್ಕಳಿಗೆ ಮಹಾಪುರುಷರ ವೇಷಭೂಷಣ ತೊಡಿಸಿ, ಮಾರ್ಗದಲ್ಲಿ ನಿಲ್ಲಿಸಲಾಗಿತ್ತು. ಪಥಸಂಚಲನ ಮಧ್ಯಾಹ್ನ ನಗರದ ವೀರಶೈವ ಜನರಲ್ ಲೈಬ್ರರಿಯಿಂದ ಪ್ರಾರಂಭಗೊಂಡು ಪಂ. ಪುಟ್ಟರಾಜ ಬಸ್ ನಿಲ್ದಾಣ (ಮಾಳ ಶೆಟ್ಟಿ ಸರ್ಕಲ್), ಗ್ರೇನ್ ಮಾರ್ಕೆಟ್ ರೋಡ್, ಕಂಬಾರ ಸಾಲ, ನಾಮಜೋಷಿ ರೋಡ್ ಮೂಲಕ ಸಾಗಿತು. ಬಸವೇಶ್ವರ ಸರ್ಕಲ್ (ಹತ್ತಿಕಾಳ ಕೂಟ), ಪಟೇಲ್ ರೋಡ್, ಶ್ರೀ ಅಂಬಾಭವಾನಿ ದೇವಸ್ಥಾನ ರೋಡ್ ಮತ್ತು ಸರಾಫ್ ಬಜಾರ್ ರೋಡ್‌ಗಳಲ್ಲಿ ಸಂಚರಿಸಿ ಹುಯಿಲಗೋಳ ನಾರಾಯಣರಾವ್ ವೃತ್ತ (ಟಾಂಗಾಕೂಟ), ಮಹೇಂದ್ರಕರ್ ಸರ್ಕಲ್, ಡಿ.ಸಿ. ಮಿಲ್ ರೋಡ್ ಹಾಗೂ ಕಾಮನಕಟ್ಟಿ ರೋಡ್ ದಾಟಿ ಶಂಕರಲಿಂಗ ದೇವಸ್ಥಾನ ರೋಡ್ (ಶಹಪುರ ಪೇಟೆ), ಕರ್ನಾಟಕ ಚಿತ್ರಮಂದಿರ ಮತ್ತು ಗಾಂಧಿ ಸರ್ಕಲ್ ಹಾದು ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.