ಬ್ರಾಹ್ಮಣ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳಲ್ಲ; ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು

9 Hanumasagara 4
ಹನುಮಸಾಗರದಲ್ಲಿ ಶ್ರೀ ರುಕ್ಮಿಣಿ ಪಾಂಡುರಂಗ ದೇವರ ಜಾತ್ರೆ ಹಾಗೂ ಶ್ರೀಮದ್ಭಾಗವತ ಮಹಾಸತ್ರ ಕಾರ್ಯಕ್ರಮದಲ್ಲಿ ಉಡುಪಿಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಮಾತನಾಡಿದರು. ಶ್ರೀ ವಿದ್ಯಾರಾಜೇಶ್ವರ ತೀರ್ಥರು ಇದ್ದರು.
Published on


ಹನುಮಸಾಗರ: ಭಾಗವತ ಅಮೃತವಿದ್ದಂತೆ. ಅದನ್ನು ಕೇಳುವುದರಿಂದ ಪುಣ್ಯ ಲಭಿಸಲಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.


ಪಟ್ಟಣದ ಶ್ರೀ ರುಕ್ಮೀಣಿ ಪಾಂಡುರಂಗ ದೇವರ ಜಾತ್ರೆ ಹಾಗೂ ಶ್ರೀ ಮದ್ಭಾಗವತ ಮಹಾಸತ್ರ ಕಾರ್ಯಕ್ರಮದಲ್ಲಿ ಭಾಗವತ ಸತ್ರ ಕುರಿತು ಬುಧವಾರ ಅನುಗ್ರಹ ಸಂದೇಶ ನೀಡಿದರು. ದೇವರ ಪೂಜೆ ನಿರಂತರವಾಗಿರಬೇಕು. ಶ್ರೀಕೃಷ್ಣನ ಜಪಿಸಿದರೆ ಅಲ್ಲಿ ಭಗವಂತ ನೆಲೆಸಿರುತ್ತಾನೆ. ಅಮ್ಮನ ರೀತಿಯಲ್ಲಿ ಭಗವಂತ ಭಕ್ತರ ಮೇಲೆ ಪ್ರೀತಿ ತೋರುತ್ತಾನೆ ಎಂದರು.


ಬ್ರಾಹ್ಮಣ ಸಮಾಜಕ್ಕೆ ಮೀಸಲಾತಿ ಇಲ್ಲ. ಅದನ್ನು ನಾವು ಕೇಳುವುದಿಲ್ಲ. ಆದರೆ ನಮ್ಮ ಧರ್ಮ ಆಚರಣೆ, ಸಂಸ್ಕೃತಿಯಿಂದ ಭಗವಂತನ ಬಳಿ ಮೀಸಲಾತಿ ಇದೆ. ಧರ್ಮಾಚರಣೆ, ಭಗವಧ್ಯಾನವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.


ಪ್ರಮುಖರಾದ ಪಂ.ಧೀರೇಂದ್ರಾಚಾರ್ಯ ಪೂಜಾರ, ಪ್ರಮೋದಾಚಾರ್ಯ ಪೂಜಾರ, ಪ್ರಹ್ಲಾದಾಚಾರ್ಯ ಪೂಜಾರ, ಅಡವೀಶಾಚಾರ್ಯ ಆಶ್ರೀತ, ಪ್ರಹ್ಲಾದರಾಜ ದೇಸಾಯಿ, ಸುಬ್ಬಣ್ಣಾಚಾರ್ಯ ಕಟ್ಟಿ, ಪಾಂಡುರಂಗಾಚಾರ್ಯ ಪಪ್ಪು, ಭೀಮಶೇನಾಚಾರ್ಯ ಪುರಾಣಿಕ, ಪ್ರಹ್ಲಾದ ಜೋಷಿ, ಗುರಾಚಾರ್ಯ ಪೂಜಾರ, ಮಧು ಆಚಾರ ಪೂಜಾರ, ಮುರಳಿ ಆಚಾರ ಪೂಜಾರ, ಪಿ.ಕೆ.ಪುರೋಹಿತ, ಪ್ರಹ್ಲಾದ ಕಟ್ಟಿ, ವಿಜಯೀಂದ್ರ ಕುಲಕರ್ಣಿ, ಶ್ರೀನಿವಾಸ ಜಹಗೀರದಾರ ಇತರರಿದ್ದರು.


ಹಾಲೋಕುಳಿ ಸಂಭ್ರಮ: ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಬುಧವಾರ ಬ್ರಾಹ್ಮಣರಿಂದ ಹಾಲೋಕುಳಿ ಆಚರಿಸಲಾಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಉಡುಪಿಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಶ್ರೀ ಪಾಂಡುರಂಗದೇವರ ಉತ್ಸವ ಮೂರ್ತಿಗಳಿಗೆ ಅವಭೃತ ಸ್ನಾನ ಮಾಡಿಸಿ ಓಕಳಿಗೆ ಚಾಲನೆ ನೀಡಿದರು. ಪರಸ್ಪರ ಬಣ್ಣ ಎರಚಿಕೊಂಡು ದೇವರ ಪಲ್ಲಕ್ಕಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಿದರು. ಮಕ್ಕಳು, ಯುವಕರು, ಹಿರಿಯರು ಓಕಳಿಯಲ್ಲಿ ಮಿಂದೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net