ವಿದ್ಯಾಪ್ರಸನ್ನ ತೀರ್ಥ ಶ್ರೀಗಳ 50ನೇ ಆರಾಧನೆ ಸಂಪನ್ನ

tnp sosle 3
Published on

ಸೋಸಲೆ ಶ್ರೀ ಸಾನ್ನಿಧ್ಯದಲ್ಲಿ ಸಹಸ್ರ ಶಂಖಾಭಿಷೇಕ

ತಿ.ನರಸೀಪುರ: ಸೋಸಲೆ ಗ್ರಾಮದಲ್ಲಿ ವ್ಯಾಸರಾಜರ ಮಹಾಸಂಸ್ಥಾನದ ಹಿಂದಿನ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ 50ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೂಲ ವೃಂದಾವನಕ್ಕೆ ಬೆಳಗ್ಗೆ ನಿರ್ಮಾಲು ವಿಸರ್ಜನೆ, ಜಲಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಅಲಂಕಾರ ಮತ್ತು ವಿಶೇಷ ಮಂಗಳಾರತಿ ಮಾಡಲಾಯಿತು. ಸಂಸ್ಥಾನ ಪೂಜೆ ನೆರವೇರಿಸಿದ ಶ್ರೀಗಳು, ಮಾರ್ಗಶಿರ ಹುಣ್ಣಿಮೆ ಅಂಗವಾಗಿ ಮಠದ ಮೂಲ ಪ್ರತಿಮೆ ಮತ್ತು ಸಾಲಿಗ್ರಾಮಗಳಿಗೆ ಸಹಸ್ರ ಶಂಖಾಭಿಷೇಕವನ್ನೂ ಇದೇ ಸಂದರ್ಭ ಮಾಡಿದ್ದು ಭಕ್ತಿ ಭಾವದ ದ್ಯೋತಕವಾಗಿತ್ತು. ಭಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ನಂತರ ಸಂದೇಶ ನೀಡಿ, ವೇದಾಂತ ಕ್ಷೇತ್ರ ಮತ್ತು ಮಾಧ್ವ ಪರಂಪರೆಗೆ ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಕೊಡುಗೆ ಅಪಾರವಾಗಿದೆ ಎಂದರು. ಪ್ರಖರ ವಾಗ್ಮಿಗಳು, ಅಪ್ರತಿಮ ಪಂಡಿತರೂ, ಕೃತಿ ರಚನೆಕಾರರೂ ಆಗಿದ್ದ ಶ್ರೀಗಳು ೀಠದಲ್ಲಿ ವಿರಾಜಮಾನರಾಗಿದ್ದರೂ ಜನಾನುರಾಗಿಗಳಾಗಿದ್ದರು. ಅವರ ಜೀವನ, ಸಾಧನೆ ಮಾದರಿ ಎಂದು ಸ್ಮರಿಸಿದರು. ಶ್ರೀ ವಿದ್ಯಾವಾರಿಧಿ ತೀರ್ಥರನ್ನು ಗುರುವಾಗಿ ಪಡೆದಿದ್ದ ಅವರು ನಾಡಿನ ಹಲವೆಡೆ ಧಾರ್ಮಿಕ, ಸಾಂಸ್ಕೃತಿಕ ಸಂಘ- ಸಂಸ್ಥೆಗಳನ್ನು ಸ್ಥಾಪಿಸಿ ಪರಂಪರೆಗೆ ಬಹು ದೊಡ್ಡ ಕೊಡುಗೆ ನೀಡಿದರು. ಅವರಿಂದ ಚಾಲನೆಗೊಂಡ ಅನೇಕ ಸಂಘಟನೆಗಳು ಇಂದಿಗೂ ಧಾರ್ಮಿಕ, ವೈದಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವುದು ಗಮನಾರ್ಹ ಸಂಗತಿ ಎಂದರು.

ಪ್ರಸಾದ ವಿತರಣೆ: ಶ್ರೀ ವಿದ್ಯಾ ಪ್ರಸನ್ನ ತೀರ್ಥರ 1969ರಲ್ಲಿ ವೃಂದಾವನಸ್ಥರಾದರೂ ಅವರು ಹಾಕಿಕೊಟ್ಟ ಮಾರ್ಗ, ರಚಿಸಿದ ಪದ್ಯ, ಗ್ರಂಥಗಳು ದಾರಿದೀಪವಾಗಿವೆ ಎಂದು ಶ್ರೀಗಳು ಶ್ಲಾಘಿಸಿದರು. 300ಕ್ಕೂ ಹೆಚ್ಚು ಭಕ್ತರು ಭಾಗವಹಿಸಿ, ದೇವರ, ವೃಂದಾವನದ ದರ್ಶನ ಪಡೆದು ಧನ್ಯತೆ ಮೆರೆದರು. ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಜಗನ್ನಾಥ ರಾವ್, ಮಠದ ಪ್ರಮುಖರಾದ ರಾಯರಹುಂಡಿ ಆನಂದ ರಾವ್, ಸುಧೀಂದ್ರ ರಾವ್, ವೆಂಕಣ್ಣ, ಶ್ರೀಗಳ ಆಪ್ತ ಕಾರ್ಯದರ್ಶಿ ಅಭಿಜಿತ್ ರಾವ್, ಮಠದ ವ್ಯವಸ್ಥಾಪಕ ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net