ಜೀವನಕ್ಕೆ ಬೇಕು ಭಗವಂತನ ಅನುಗ್ರಹ

web (1)
Published on

ಶೃಂಗೇರಿ: ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಯ ಸಾನ್ನಿಧ್ಯ ಪರಮಪವಿತ್ರ. ಅವರ ಮಹಿಮೆ ಅಸಾಧಾರಣ ಎಂದು ಶ್ರೀಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಿಗ್ಗಾದಲ್ಲಿ ಬುಧವಾರ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿಯ ಅಷ್ಟಬಂಧ ಮತ್ತು ಕುಂಭಾಭಿಷೇಕ ನೆರವೇರಿಸಿ ಆಶೀರ್ವಚನ ನಿಡಿದರು.

ದಶರಥ ಮಹಾರಾಜನ ಬಳಿ ವಸಿಷ್ಠರಂತಹ ಮುನಿಗಳು ಇದ್ದರೂ ಮಹಾರಾಜನ ಬಳಿ ಪುತ್ರಕಾಮೇಷ್ಠಿ ಯಾಗದ ಸಂಕಲ್ಪ ಮಾಡಿಸಿ, ಅದರ ನೇತೃತ್ವ ವಹಿಸಿ ಶ್ರೀರಾಮನ ಅವತಾರಕ್ಕೆ ಕಾರಣಕರ್ತರಾದವರು ಶ್ರೀ ಋಷ್ಯಶೃಂಗರು. ಅವರ ಸಾನ್ನಿಧ್ಯದಲ್ಲಿ ಒಂದು ಕ್ಷಣ ನಿಂತರೆ ಸಾಕು ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.

ಶ್ರೀ ಆದಿಶಂಕರರು ದಕ್ಷಿಣದ ಶೃಂಗೇರಿಯಲ್ಲಿ ಮೊದಲ ಪೀಠ ಸ್ಥಾಪಿಸಿದರು. ಕಾರಣ ಇದು ಶತ್ರುತ್ವವಿಲ್ಲದೆ ಬಾಂಧವ್ಯ ಸಾರುವ ಪವಿತ್ರಸ್ಥಳ ಎಂಬುದನ್ನು ತಮ್ಮ ಯಾತ್ರೆ ಸಮಯದಲ್ಲಿ ಮನಗಂಡಿದ್ದರು. ಅದಕ್ಕೆ ಮೂಲ ಕಾರಣ ವಿಭಾಂಡಕ ಹಾಗೂ ಶ್ರೀ ಋಷ್ಯಶೃಂಗರು ಎಂದು ಹೇಳಿದರು.

ಊರುಗಳಲ್ಲಿ ದೇವಸ್ಥಾನ ಇರುವುದು ವಾಡಿಕೆ. ದೇವಾಲಯಗಳಿಗೆ ಪೂಜೆ, ಉತ್ಸವಗಳನ್ನು ಶ್ರದ್ಧೆಯಿಂದ ಮಾಡಬೇಕು. ಬಾಹ್ಯ ವಿಷಯ ಬದಿಗಿಟ್ಟು ಹತ್ತು ನಿಮಿಷ ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನ ಆರಾಧನೆಯಿಂದ ನಮಗೆ ಒಳಿತಾಗುತ್ತದೆ. ನಮ್ಮ ಹಾಗೂ ಸಮಾಜದ ಹಿತಕ್ಕೋಸ್ಕರ ಭಗವಂತನ ಅನುಗ್ರಹ ಮುಖ್ಯ. ಈ ಅನುಗ್ರಹವನ್ನು ನಾವೇ ಸ್ವತಃ ಅನುಭವಿಸಿದಾಗ ಮಾತ್ರ ಉತ್ತಮ ಫಲ ದೊರಕುತ್ತದೆ ಎಂದರು.

ನಾವು ತಯಾರು ಮಾಡಲಾಗದ ಅಮೂಲ್ಯ ವಸ್ತುಗಳನ್ನು ಪ್ರಕೃತಿ ನಮಗೆ ನೀಡಿದೆ. ಇದನ್ನು ಜತನದಿಂದ ಕಾಪಾಡಿಕೊಳ್ಳುವುದು ಸರ್ವರ ಕರ್ತವ್ಯ. ಈ ಕ್ಷೇತ್ರಕ್ಕೆ ದಂಡಕಾರಣ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ. ಶ್ರೀರಾಮ ವನವಾಸ ಮಾಡಿದ ಕ್ಷೇತ್ರ ಎಂದೂ ಪುರಾಣದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.

ಅಷ್ಟಾಂಗ ಯೋಗದಲ್ಲಿ ‘ಅಹಿಂಸಾ’ ಎಂಬ ಪದವಿದೆ. ಯಾರು ಅಹಿಂಸಾ ಧರ್ಮವನ್ನು ಅನುಷ್ಠಾನ ಮಾಡುತ್ತಾನೋ, ಯಾರು ಪರರನ್ನು ತನ್ನ ಮಾತಿನಿಂದ ನೋಯಿಸದೆ ಬದುಕುತ್ತಾನೋ ಅಂಥವನಿಗೆ ಭಗವಂತ ಬೇಗ ಒಲಿಯುತ್ತಾನೆ ಎಂದರು.

ಕುಂಭಾಭಿಷೇಕದ ಮೊದಲು ಶ್ರೀ ಋಷ್ಯಶೃಂಗಸ್ವಾಮಿ ಹಾಗೂ ಶ್ರೀ ಶಾಂತಮ್ಮ ಅವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ದೇವಾಲಯಗಳನ್ನು ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು.

ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೆ.ಸಿ.ಶಿವಶಂಕರ್, ತಲಗಾರು ಆನಂದ ರಾವ್, ಸುಬ್ಬಣ್ಣ, ಹುಲಗಾರು ಚಂದ್ರಶೇಖರ್ ರಾವ್ ಅವರನ್ನು ಗೌರವಿಸಲಾಯಿತು. ಕಲಶ ನಿರ್ಮಾಣ ಮಾಡಿದ ಶ್ರೀ ನರಸಿಂಹಾಚಾರ್ ಹಾಗೂ ದಾನಿಗಳನ್ನು ಶ್ರೀಗಳು ಅನುಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವರಾದ ಡಿ.ಎನ್.ಜೀವರಾಜ್, ಕೆ.ಜೆ.ಜಾರ್ಜ್, ಜಿಪಂ ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net