

ಅರಕಲಗೂಡು: ಇತಿಹಾಸ ಪ್ರಸಿದ್ಧ ತಾಲೂಕಿನ ಕೇರಳಾಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ನೆರವೇರಿತು.
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಕಳೆದ ಕೆಲ ದಿನಗಳಿಂದ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಭಾನುವಾರ ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯ ನೆರವೇರಿದವರು. ನಂತರ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿಸಿ ಹೊರತಂದು ರಥ ಬೀದಿಯಲ್ಲಿ ಮಂಗಳ ವಾದ್ಯದೊಂದಿಗೆ ಉತ್ಸವ ನಡೆಸಲಾಯಿತು. ನಂತರ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಅಲಂಕೃತ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರ ಜಯಘೋಷಗಳ ನಡುವೆ ತೇರು ಎಳೆಯಲಾಯಿತು.
ರಥ ಬೀದಿಯಲ್ಲಿ ಸಾಗಿದ ತೇರಿಗೆ ಭಕ್ತರು ಹಣ್ಣು ಧವನ ಎಸೆದು ಭಕ್ತಿ ಭಾವ ಸಮರ್ಪಿಸಿದರು. ಸಂಪ್ರದಾಯದಂತೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗ ಕೆಲಕಾಲ ರಥ ನಿಲ್ಲಿಸಿ ನಂತರ ಸುಸೂತ್ರವಾಗಿ ಸ್ವಸ್ಥಾನಕ್ಕೆ ಕರೆತರಲಾಯಿತು. ಬಿಸಿಲಿನಿಂದ ಬಳಲಿದ್ದ ಭಕ್ತರಿಗೆ ಸ್ಥಳೀಯರು ತಂಪು ಪಾನೀಯ ನೀಡಿದರು. ಗ್ರಾಮದಲ್ಲಿ ದಿನವಿಡೀ ಜಾತ್ರೆಯ ಸಡಗರ ಕಳೆಗಟ್ಟಿತ್ತು. ಜಾತ್ರೆಯಲ್ಲಿ ವಿವಿಧ ವ್ಯಾಪಾಸ್ಥರು ಭರ್ಜರಿ ವ್ಯಾಪಾರ ನಡೆಸಿದರು. ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಸಹಸ್ರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು.