

ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಬುಧವಾರ ಜರುಗಿತು.
ವೀರಭದ್ರೇಶ್ವರಸ್ವಾಮಿ ದೇವರನ್ನು ಮೆರವಣಿಗೆ ಮಾಡಿ ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಕೂರಿಸಲಾಯಿತು. ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ರಥಕ್ಕೆ ಅಗ್ರಪೂಜೆ ಸಲ್ಲಿಸಿದ ನಂತರ ರಥವನ್ನು ಗ್ರಾಮದಿಂದ ಹೊರವಲಯದಲ್ಲಿರುವ ವೀರಭದ್ರಸ್ವಾಮಿ ದೇಗುಲದವರಿಗೆ ಎಳೆಯಲಾಯಿತು. ಪ್ರಳಯಕಾಲನಿಗೆ ಜಯದ ಘೋಷ ಕೂಗಿದರು. ರಥಕ್ಕೆ ಹಣ್ಣು ದವನ ಎಸೆದು ಭಕ್ತರು ನಮಿಸಿದರು.
ಕುರಿಗಾಹಿಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿ ರೋಗರುಜಿನ ಬಾರದಂತೆ ದೇವರಿಗೆ ಹರಕೆ ಒಪ್ಪಿಸಿದರು. ಭಕ್ತರಿಗೆ ನೀರು, ಮಜ್ಜಿಗೆ, ಪಾನಕ, ಅನ್ನದಾಸೋಹ ಮಾಡಲಾಯಿತು.