ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಅನಾವರಣ

SVR BIDUGADE
Published on

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಉದ್ಭವ ಮೂರ್ತಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ವಿುಕ ಕೈಂಕರ್ಯ ಏ.5ರಿಂದ ಏ. 8ರವರೆಗೆ ಜರುಗಲಿದೆ.

ಏ. 5ರಂದು ಬೆಳಗ್ಗೆ ವೀರಭದ್ರೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ಸಂಜೆ ಕಳಸಾರೋಹಣ, ನಂತರ, ಹೂವಿನ ರಥೋತ್ಸವ ಹಾಗೂ ಅನ್ನಪ್ರಸಾದ ಜರುಗಲಿದೆ. ಏ. 6ರಂದು ಅಭಿಷೇಕ, ಸಂಜೆ ದೊಡ್ಡರಥಕ್ಕೆ ಗ್ರಾಮಸ್ಥರಿಂದ ಎಡೆ ಕೊಡುವುದು. ನಂತರ, ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಮೇಳದವರಿಂದ ಡೊಳ್ಳಿನ ಪದಗಳು ಜರುಗಲಿವೆ.

ಏ. 7ರಂದು ಅಭಿಷೇಕ, ಶ್ರೀ ವೀರಭದ್ರೇಶ್ವರ ಪುರವಂತಿಕೆ ಕಲಾ ತಂಡದ ಪುರವಂತ ಸಂಗಮೇಶ್ವರ ಪರಶೆಟ್ಟಿ ಹಾಗೂ ಸದಸ್ಯರಿಂದ ಗುಗ್ಗಳ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ಡೊಳ್ಳಿನ ಮೇಳ, ಭಜಂತ್ರಿ ಮೇಳದೊಂದಿಗೆ ಜರುಗಲಿದೆ. ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು.

ಏ. 8ರಂದು ಬೆಳಗ್ಗೆ ರುದ್ರಾಭಿಷೇಕ, ಸಂಜೆ ಕಡುಬಿನ ಕಾಳಗ ಜರುಗಲಿದೆ. ಸಕಲ ವಾದ್ಯ ವೈಭವಗಳೊಂದಿಗೆ ಓಕುಳಿ ಬಂಡಿ ಮೆರವಣಿಗೆ ಜರುಗಲಿದೆ ಎಂದು ಜಾತ್ರಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಮಂತ್ರಣ ಪತ್ರಿಕೆ ಅನಾವರಣ

ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಶುಕ್ರವಾರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿದರು. ಪದಾಧಿಕಾರಿಗಳಾದ ಅಶೋಕ ಯಲಿಗಾರ, ಬಸವರಾಜ ಕುಂದಗೋಳ, ವೀರಪ್ಪ ಹೊಸಳ್ಳಿ, ನಾಗನಗೌಡ ಪಾಟೀಲ, ಬಸವರಾಜ ಇಂಗಳಗಿ, ಮಾಂತೇಶ ಕೂಡಲ, ದ್ಯಾಮನಗೌಡ ದ್ಯಾಮನಗೌಡ್ರ, ವೀರಭದ್ರಪ್ಪ ಹುಲಗೂರ, ಚನ್ನಬಸಯ್ಯ ಹಿರೇಮಠ, ವೀರಯ್ಯ ಸಂಕೀನಮಠ, ಈರಣ್ಣ ತೆಂಬದಮನಿ, ಏಕಪ್ಪ ಬಿಜ್ಜೂರು. ಗಣೇಶ ಬಡಿಗೇರ, ರಾಮಚಂದ್ರ ಬಡಿಗೇರ, ಬಸವರಾಜ ನೀಲಪ್ಪನವರ, ಉಡಚಪ್ಪ ಕಲಕೋಟಿ, ವೀರನಗೌಡ ಸಂಕನಗೌಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net