

ಎಚ್.ಡಿ.ಕೋಟೆ: ಪಟ್ಟಣದ ಶ್ರೀ ವಾರಾಹಿ ಹಾಗೂ ಮಾರಮ್ಮನ ಕೊಂಡೋತ್ಸವ ಬುಧವಾರ ದೇವಾಲಯದ ಎದುರು ವಿಜೃಂಭಣೆಯಿಂದ ಜರುಗಿತು.
ಕೊಂಡಕ್ಕಾಗಿ 101ಎತ್ತಿನಗಾಡಿಯಲ್ಲಿ ಕಗ್ಗಲಿ ಸೌದೆಯನ್ನು ಸಿದ್ದಪ್ಪಾಜಿ ರಸ್ತೆಯ ನಿವಾಸಿಗಳು ಮತ್ತಿತ್ತರ ಪಟ್ಟಣ ನಿವಾಸಿಗಳಿಂದ ಸಂಗ್ರಹಿಸಲಾಗಿತ್ತು. ಸಂಪ್ರದಾಯದಂತೆ ನಡೆದ ಕೊಂಡೋತ್ಸವವನ್ನು ಎಚ್.ಡಿ.ಕೋಟೆ ಪಟ್ಟಣದ ನಿವಾಸಿಗಳು ಅಲ್ಲದೆ, ಚಾಕಹಳ್ಳಿ, ಕಟ್ಟೇಮನುಗನಹಳ್ಳಿ, ತೊರವಳ್ಳಿ, ಬೆಳಗನಹಳ್ಳಿ, ಕೃಷ್ಣಾಪುರ, ಹೆಬ್ಬಳ್ಳ, ಮಟಕೆರೆ, ಯರಹಳ್ಳಿ, ವಡ್ಡರಗುಡಿ, ಚಕ್ಕೋಡನಹಳ್ಳಿ, ಹಾರೋಪುರ, ಹೆಗ್ಗಡಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಆಗಮಿಸಿ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು.
ಭಕ್ತರಾದ ಬೀರೇಗೌಡ, ಶಶಿ ಬೀರೇಗೌಡ, ಕೃಷ್ಣ, ಕಾಳಹುಚ್ಚೇಗೌಡ ಕೊಂಡವನ್ನು ಹಾಯ್ದರು. ಪಟ್ಟಣದ ವರದರಾಜಸ್ವಾಮಿ ದೇವಾಲಯದಿಂದ ಬಾಗಿನವನ್ನು ಅಮ್ಮನವರಿಗೆ ಅರ್ಪಿಸಲಾಯಿತು. ಬೀರೇಶ್ವರ ದೇವಾಲಯದಿಂದ ವಿವಿಧ ಕೊಂಬು, ಕಹಳೆಗಳು ಮತ್ತು ಸತ್ತಿಗೆಯನ್ನು ಅರ್ಪಿಸಲಾಯಿತು. ಸಿದ್ದಪ್ಪಾಜಿ ರಸ್ತೆಯಲ್ಲಿನ ಸಿದ್ದಪ್ಪಾಜಿ ದೇವಾಲಯದಿಂದ ಅಲ್ಲಿನ ಭಕ್ತರು ವದೆಯಾಡಲು ಸೌದೆ, ಹುಲ್ಲನ್ನು ತಂದು ದೇವಾಲಯದ ಮುಂದೆ ವದೆಯಾಡಿದರು.
ಇದಕ್ಕೂ ಮುನ್ನ ಅರಮನೆ ಪೂಜೆಯನ್ನು ತಹಸೀಲ್ದಾರ್ ನೆರವೇರಿಸಿದರು. ಕೊಂಡೋತ್ಸವ ವೀಕ್ಷಿಸಲು ಅನುಕೂಲವಾಗುವಂತೆ ಪ್ರಮುಖ ಸ್ಥಳಗಳಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಛಾಯಾಗ್ರಾಹಕ ಸಂಘದಿಂದ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಕೊಂಡೋತ್ಸವ ವೀಕ್ಷಣೆಗೆ ಸಹಸ್ರಾರು ಭಕ್ತರು ಆಗಮಿಸಿದ್ದರು.