ಶ್ರೀಶೈಲ ಪೀಠದ ಮಹಾಮೇರು ಶ್ರೀ ವಾಗೀಶ ಪಂಡಿತಾರಾಧ್ಯ ಭಗವತ್ಪಾದರು

Shree Shaila
Published on

| ನಿರಂಜನ ದೇವರಮನೆ ಚಿತ್ರದುರ್ಗ

ವೀರಶೈವ ಧರ್ಮಪೀಠಗಳಲ್ಲಿ ಒಂದಾದ ಶ್ರೀಶೈಲ ಸೂರ್ಯ ಸಿಂಹಾಸನ ಪೀಠವು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ನೆಲೆಗೊಂಡು ಜನರಲ್ಲಿರುವ ಅಜ್ಞಾನಾಂಧಕಾರವನ್ನು ತೊಡೆದು ಸುಜ್ಞಾನದ ಬೆಳಕನ್ನು ತುಂಬಿದ ಮಹಾಪೀಠವಾಗಿದೆ. ಶ್ರೀಶೈಲ ಪೀಠಕ್ಕೆ ಭವ್ಯವಾದ ಪರಂಪರೆ ಇದೆ. ಇಂಥ ಮಹಾಪೀಠಕ್ಕೆ ಸ್ವರ್ಣಯುಗವನ್ನು ದಾಖಲಿಸಿದ ಕೀರ್ತಿ ಲಿಂ. ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಗೆ ಸಲ್ಲುತ್ತದೆ.

ಶ್ರೀ ವಾಗೀಶ ಪಂಡಿತಾರಾಧ್ಯ ಭಗವತ್ಪಾದರು 1908ರಲ್ಲಿ ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಹಿರೇಮಠದ ವೇದಮೂರ್ತಿ ಬಸಯ್ಯ ಸ್ವಾಮಿ ಮತ್ತು ರುದ್ರಮ್ಮಾಂಬೆ ಅವರ ಪುಣ್ಯಗರ್ಭದಲ್ಲಿ ಜನಿಸಿ ಚಿಕ್ಕಂದಿನಲ್ಲಿಯೇ ವೀರಶೈವಧರ್ಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡವರು. ಸಿದ್ಧಾಂತ ಶಿಖಾಮಣಿ, ಯೋಗಶಾಸ್ತ್ರ, ವೇದೋಪನಿಷತ್ ಹಾಗೂ ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಅಗಾಧ ಪ್ರಭೆಯನ್ನು ತಮ್ಮದಾಗಿಸಿಕೊಂಡವರು. ಉಜ್ಜಯಿನಿ ಸದ್ದರ್ಮ ಪೀಠದ ಲಿಂ. ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ಕೃಪೆಗೆ ಪಾತ್ರರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದವರು. ಕಾಶಿ ಪೀಠದಲ್ಲಿ ವೀರಶೈವ ಸಿದ್ಧಾಂತ ಮತ್ತು ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹೆಚ್ಚಿನ ಅಧ್ಯಯನವನ್ನು ಕೈಗೊಂಡು ವಿದ್ಯಾನಿಧಿಯಾಗಿ ಹೊರಹೊಮ್ಮಿದರು. ಪಾಲಿ, ಪಾರ್ಸಿ, ಸಂಸ್ಕೃತ, ಬಂಗಾಳಿ, ಹಿಂದಿ, ಉರ್ದು, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಅವುಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತ ಪ್ರವಚನ ನೀಡುವ ಅವರ ಪರಿ ಅದ್ವಿತೀಯವಾಗಿ ಇರುತ್ತಿತ್ತು. ತಮ್ಮ ಸರ್ವಾಂಗ ಸುಂದರ ಕಾಯ ಮತ್ತು ವ್ಯಕ್ತಿತ್ವದ ಮೂಲಕ ಎಲ್ಲ ಭಕ್ತರನ್ನು ಆಕರ್ಷಿಸುವ ಆಯಸ್ಕಾಂತೀಯ ಗುಣ ಅವರಲ್ಲಿತ್ತು, ಅಂಥ ಮಹಾಮಹಿಮರು 1940ರ ಜುಲೈ 7ರಂದು ಶ್ರೀಶೈಲ ಪೀಠದ ಅಧಿಪತ್ಯವನ್ನು ವಹಿಸಿಕೊಂಡು ಶ್ರೀಪೀಠವನ್ನು ಉತ್ತುಂಗಕ್ಕೆರಿಸಿದ ಧೀರೋದಾತ್ತರು.

ಅವರು ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮಗಳಲ್ಲಿ ಮೇಲ್ಪಂಕ್ತಿ ಹಾಕಿದವರು. ದೇಶದ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದ ನೇತಾರರ ಪ್ರೀತಿ-ಗೌರವಕ್ಕೆ ಪಾತ್ರರಾದವರು. ಅಂಥ ಮಹಾನ್ ವ್ಯಕ್ತಿತ್ವದ ಎದುರಿಗೆ ಅಂದಿನ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್, ಡಾ. ಎಸ್.ರಾಧಾಕೃಷ್ಣನ್, ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಬಿ.ಡಿ ಜತ್ತಿ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಸಂಜೀವ್ ರೆಡ್ಡಿ ಹಾಗೂ ಬ್ರಹ್ಮಾನಂದ ರೆಡ್ಡಿಯಂಥವರು ತಲೆಬಾಗಿ ರಾಜಕೀಯ ಮಾರ್ಗದರ್ಶನ ಪಡೆಯುತ್ತಿದ್ದರು.

ಶ್ರೀ ವಾಗೀಶ ಭಗವತ್ಪಾದರು ಸಮಗ್ರ ದೃಷ್ಟಿಯುಳ್ಳವರಾಗಿ ಎಲ್ಲ ಜಾತಿ-ಮತ-ಪಂಥಗಳೊಂದಿಗೆ ಸಾಮರಸ್ಯ ಸಾಧಿಸಿದ್ದರು. ಮಸೀದಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸಿ ಉರ್ದು ಭಾಷೆಯಲ್ಲಿ ಪ್ರವಚನ ನೀಡಿದ ಅವರ ಪರಿ ಇತರ ಧರ್ವಿುಯರಿಗೆ ಅನುಕರಣೀಯವಾಗಿದೆ. ‘ಬೆಳಗು ಪಂಚಾಚಾರ್ಯ ತತ್ವವೇ ಬೆಳಗು, ಬಸವನ ಭಕ್ತಿ ತತ್ವವೇ’ ಎಂಬ ಅವರ ಕವಿತೆಯ ಸಾಲು ವೀರಶೈವ-ಲಿಂಗಾಯತ ಕವಲುದಾರಿಯನ್ನು ಒಗ್ಗೂಡಿಸುವ ದಾರಿದೀಪದಂತಿದೆ.

ಭಗವತ್ಪಾದರು ಬುದ್ಧಿ-ಮನಸ್ಸುಗಳನ್ನು ತಿದ್ದುವುದಲ್ಲದೆ ಶರೀರವನ್ನು ಸದೃಢವಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ನಾಡಿನ ಲಕ್ಷಾಂತರ ಅನಾರೋಗ್ಯ ಪೀಡಿತರಿಗೆ ಸಂಜೀವಿನಿಯಾಗಿದ್ದರು. ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಗ್ರಂಥಗಳನ್ನು ರಚಿಸಿದ್ದರು.

ಸಮಗ್ರ ಶ್ರೀಶೈಲ ಮಹಾಕ್ಷೇತ್ರದ ಅಭಿವೃದ್ಧಿಗೆ ಕಾಯಕಲ್ಪ ಒದಗಿಸಿದ ಕಲಿಯುಗದ ಕಾಮಧೇನು- ಕಲ್ಪವೃಕ್ಷವೇ ಅವರಾಗಿದ್ದಾರೆ. ಪಾತಾಳ ಗಂಗೆಯ ನೀರಿನ ಸದ್ವಿನಿಯೋಗ, ಶ್ರೀಕ್ಷೇತ್ರದ ಹೆದ್ದಾರಿಗಳ ನಿರ್ವಣ, ಧಾರ್ವಿುಕ ಕಟ್ಟಡಗಳ ನಿರ್ವಣ, ವಿವಿಧ ಶಾಲಾ-ಕಾಲೇಜುಗಳ ಸ್ಥಾಪನೆ, ಸಮರ್ಥ ಉತ್ತರಾಧಿಕಾರಿಯ ನೇಮಕ ಮುಂತಾದ ಅವರ ಅದ್ವಿತೀಯ ಕಾರ್ಯಗಳು ಭಕ್ತರ ಹೃನ್ಮಂದಿರಗಳಲ್ಲಿ ಅಚ್ಚೊತ್ತಿವೆ. ಭಕ್ತರನ್ನು ಬೆಳಕಿನೆಡೆಗೆ ಕರೆತಂದು ಜ್ಞಾನ-ಕ್ರಿಯೆಗಳನ್ನು ಧಾರೆಯೆರೆದು ಶ್ರೀಶೈಲ ಪೀಠಕ್ಕೆ ಶಕ್ತಿ ತುಂಬಿದ ಜ್ಞಾನಸೂರ್ಯ ಸಿಂಹಾಸನಾಧೀಶರಾದ ಶ್ರೀ ವಾಗೀಶ ಪಂಡಿತಾರಾಧ್ಯರು ಭಕ್ತರ ಹೃದಯದಲ್ಲಿ ಸಾಧನೆಯ ಮಹಾಮೇರುವೆಂದೇ ಅಭಿದಾನವನ್ನು ಪಡೆದವರು. 1986ರ ಸೆಪ್ಟೆಂಬರ್ 16ರ ಭಾದ್ರಪದ ಶುದ್ಧ ದ್ವಾದಶಿಯಂದು ಲಿಂಗಾಂಗ ಸಾಮರಸ್ಯದಲ್ಲಿ ಒಂದಾಗಿ ತಮ್ಮ ಚಿತ್ಪ್ರಭೆಯನ್ನು ಹಾಗೇ ಉಳಿಸಿಕೊಂಡ ಮಹನೀಯರು.

ಶ್ರೀ ಉಜ್ಜಯಿನಿ ಸದ್ದರ್ಮ ಪೀಠ ಹಾಗೂ ಶ್ರೀಶೈಲ ಸೂರ್ಯಪೀಠಕ್ಕೆ ಪ್ರಸ್ತುತ ಸಮರ್ಥ ಪರಮ ಪೀಠಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಶ್ರೀ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀ ವಾಗೀಶ ಭಗವತ್ಪಾದರ ಬದುಕು-ಬರಹ, ನೆನಹು-ನಮನ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖೇನ ಸ್ಮರಣಾರಾಧನೆ ಆಚರಿಸುತ್ತಿರುವುದು ಈ ನಾಡಿನ ಪುಣ್ಯವಿಶೇಷವೇ ಆಗಿದೆ.

(ಲೇಖಕರು ಅಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net