ಶ್ರೀ ಸುಬ್ಬಮ್ಮ ದೇವರ ಸುಗ್ಗಿ ಸಂಪನ್ನ

ಶ್ರೀ ಸುಬ್ಬಮ್ಮ ದೇವರ ಸುಗ್ಗಿ ಸಂಪನ್ನ
Published on

ಸೋಮವಾರಪೇಟೆ: ಶಾಂತಳ್ಳಿ ಹೋಬಳಿಯ 18 ಗ್ರಾಮಗಳು ಒಟ್ಟಿಗೆ ಸೇರಿ ಆಚರಿಸುವ 15 ದಿನಗಳ ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ನಗರಳ್ಳಿ ಗ್ರಾಮದ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಜನ ದೇವರ ಒಡೆಕಾರರನ್ನು ಬೆತ್ತದ ಉಯ್ಯಲೆಯಲ್ಲಿ ತೂಗಿ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ ಸುಗ್ಗಿಬನದ ಸಮೀಪವಿರುವ ಸುಗ್ಗಿ ರಂಗದಲ್ಲಿ ಪೂರ್ವಜರ ಜೀವನ ಪದ್ಧತಿಯನ್ನು ಬಿಂಬಿಸುವ ನೃತ್ಯ ಪ್ರಕಾರವನ್ನು ಗ್ರಾಮಸ್ಥರು ಅಭಿನಯಿಸಿ, ನೆರೆದಿದ್ದವರನ್ನು ರಂಜಿಸಿದರು. ಅದರಲ್ಲೂ ಕಡವೆ ಬೇಟೆಯಾಡುವ ಅಭಿನಯ ಪೂರ್ವಜರ ಧೈರ್ಯ ಮತ್ತು ಶೂರತ್ವವನ್ನು ಪ್ರತಿಬಿಂಬಿಸುವಂತಿತ್ತು.

ಸಾಂಪ್ರಾದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲೆ ರಂಗದಲ್ಲಿ ಬಿಲ್ಲನ್ನು ಪ್ರದರ್ಶನ ಮಾಡುತ್ತ ಮಲೆನಾಡು ಸುಗ್ಗಿ ಇತಿಹಾಸವನ್ನು ನೆರೆದಿದ್ದವರಿಗೆ ಮನವರಿಕೆ ಮಾಡಿದರು. ಸುಗ್ಗಿ ಕುಣಿತ, ಸುಗ್ಗಿಹಾಡುವದು, ಬಿಲ್ಲು ತೂಗುವುದು, ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಪ್ರದರ್ಶನ ಗಮನ ಸೆಳೆಯಿತು.

ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತೀರಿಸುವುದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ಸಹ ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯರು, ಕೊತ್ತನಳ್ಳಿ, ಇನಕ ನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿ, ಗ್ರಾಮಗಳ ಸಮೃದ್ಧಿಗೆ ಪ್ರಾರ್ಥನೆ ಮಾಡಿದರು. ಸುಗ್ಗಿಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಅನೇಕ ಭಕ್ತರು ಪೂಜೆಯೊಂದಿಗೆ ಅಂದಿನ ಅನ್ನದಾನಕ್ಕೆ ಹಣ ನೀಡಿದರು. ಭಕ್ತರಿಗೆ ಅನ್ನ ಸಂರ್ಪಣೆ ನಡೆಯಿತು.

ಶ್ರವಣ್ ನಗರಳ್ಳಿ, ಸವಿನ್ ನಗರಳ್ಳಿ, ರಚನ್ ಹಳ್ಳಿಯೂರು, ಯೋಗೇಶ್ ಜಕ್ಕನಳ್ಳಿ, ಶಶಿಕುಮಾರ್ ಹೆಮನಗದ್ದೆ, ದೇವರ ಒಡೆಕಾರರಾಗಿ ಕಾರ್ಯ ನಿರ್ವಹಿಸಿದರು. ರಮೇಶ್, ಪ್ರಸನ್ನ, ರಾಜು, ಕುಶಾಲ್, ಲೋಹಿತ್, ಮಂಜುನಾಥ್, ನಾಗರಾಜ್ ದೇವರ ಸೇವೆಯಲ್ಲಿ ಬಾಗಿಯಾದರು.

ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷರಾದ ಕೆ.ಬಿ. ಜಗದೀಶ್, ಉಪಾಧ್ಯಕ್ಷರಾದ ಸಿ. ಎಸ್.ಬೋಪ್ಪಯ್ಯ, ಕಾರ್ಯದರ್ಶಿ ಕೆ. ಯು. ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್, ಬಿ.ಪಿ. ಪ್ರದೀಪ್ ಕುಮಾರ್, ಜಿ. ಆರ್.ಸುರೇಶ್, ರಜಿತ್, ಅಶ್ವತ್.ಕೆ.ಎಂ, ಕೌಶಿಕ್, ಪ್ರಸನ್ನ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net