ತಾರಾ ಮೌಲ್ಯದ ಏಕೈಕ ಆಧ್ಯಾತ್ಮಿಕ ಸಾಧಕ ಶ್ರೀ ಶ್ರೀ ರವಿಶಂಕರ್

UDP-20-2A-Guruji
Published on

ಉಡುಪಿ: ಆರ್ಟ್​ ಆಫ್​ ಲಿವಿಂಗ್​ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್​ ಸೂರ್ಯನಂತೆ ಜಗತ್ತಿಗೆ ಭಾರತೀಯ ತತ್ವಜ್ಞಾನದ ಬೆಳಕು ಹರಿಸುತ್ತಿದ್ದಾರೆ. ತನ್ಮೂಲಕ ಗೌರಿಶಂಕರ ಪರ್ವತಂತೆ ಕಂಗೊಳಿಸುತ್ತಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಾರಾ ಮೌಲ್ಯದ ಮೆರಗು ಇರುವುದು ಅವರಿಗೆ ಮಾತ್ರ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಮಠಕ್ಕೆ ಮಂಗಳವಾರ ಆಗಮಿಸಿದ್ದ ಶ್ರೀ ಶ್ರೀ ರವಿಶಂಕರ್​ ಅವರನ್ನು ಸ್ವಾಗತಿಸಿ, ಮಠದ ಒಳಗಿನ ಚಂದ್ರಶಾಲೆಯಲ್ಲಿ ಗೌರವಿಸಿ, ಬಳಿಕ ಆಶೀರ್ವಚನ ನೀಡಿದರು.

ನಮ್ಮ ಚತುರ್ಥ ಪರ್ಯಾಯದ ಅತ್ಯಂತ ಸ್ಮರಣೀಯ ದಿನ ಇಂದು. ಕೋಟಿ ವಿಶ್ವಗಿತಾ ಪರ್ಯಾಯದ ವಿಶಿಷ್ಟ ಸಂದರ್ಭ ಗೀತಾಚಾರ್ಯನಾದ ಶ್ರೀಕೃಷ್ಣನ ದರ್ಶನಕ್ಕೆ ವಿಶ್ವಗುರುವಾಗಿ ಕಂಗೊಳಿಸುತ್ತಿರುವ ರವಿಶಂಕರ್​ ಆಗಮನ ಸಂತಸ ತಂದಿದೆ. ಶ್ರೀಕೃಷ್ಣನ ಹಾಗೂ ಆಧ್ಯಾತ್ಮಿಕ ರಾಯಭಾರಿಯಾದ ಅವರು ಉಡುಪಿಗೆ ಬಂದಿರುವುದು ಶ್ರೀಕೃಷ್ಣನಿಗೂ ಸಂತಸ ತಂದಿರಬಹುದು. ಏಕೆಂದರೆ, ಭಗವದ್ಗೀತೆಯ ಸಾರವನ್ನು ಸಮಸ್ತ ಜಗತ್ತಿಗೆ ಪ್ರಸಾರ ಮಾಡುವವ ಅವರು ಶ್ರೀಕೃಷ್ಣನ ವಿಶೇಷ ಭಕ್ತರು ಎಂದರು.

ಆಧ್ಯಾತ್ಮಿಕ ಮಾರ್ಗದಲ್ಲಿ ಹೇಗೆ ಜೀವನ ನಡೆಸಬೇಕು? ಎಂಬ ಕಲೆಯನ್ನು ಅವರು ಆರ್ಟ್​ ಆ್​ ಲಿವಿಂಗ್​ ಮೂಲಕ ಜನರಿಗೆ ತಿಳಿಸಿಕೊಡುತ್ತಾರೆ. ಅದು ಆರ್ಟ್​ ಆ್​ ಲಿವಿಂಗ್​ ಅಲ್ಲ, ಹಾರ್ಟ್​ ಆ್​ ಲಿವಿಂಗ್​. ಎಲ್ಲರ ಹೃದಯದಲ್ಲಿ ಶ್ರೀಕೃಷ್ಣ ನೆಲೆಯಾಗುವಂತೆ ಅವರು ಮಾಡುತ್ತಿದ್ದಾರೆ. ನಾವಿಬ್ಬರೂ ಶ್ರೀಕೃಷ್ಣನ ಸೇವೆ ಮಾಡುವ ಸಂತರು. ಹೀಗಾಗಿ ನಮ್ಮ ಪರ್ಯಾಯವೆಂದರೆ ಅದು ರವಿಶಂಕರ್​ ಗುರೂಜಿ ಅವರ ಪರ್ಯಾಯವೂ ಹೌದು. ಗುರೂಜಿ ಅವರ ಶತಮಾನೋತ್ಸವವನ್ನು ನಾವು ಉಡುಪಿಯಲ್ಲಿ ಆಚರಿಸುವಂತಾಗಬೇಕು. ಅದರಲ್ಲಿ ತಾನು ಭಾಗವಹಿಸಬೇಕು ಎಂದು ಆಶಿಸಿದರು.

ಜಗತ್ತಿಗೆ ಶ್ರೀಕೃಷ್ಣ ಸಂದೇಶ ಸಾರಿದ ಕ್ರಾಂತಿಕಾರಿ ಸಂತ
ಪುತ್ತಿಗೆ ಶ್ರೀಗಳು ಶ್ರೀಕೃಷ್ಣನ ಜ್ಞಾನವನ್ನು ಅರೆದು ಕುಡಿದು, ಜೀರ್ಣಿಸಿ ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದಾರೆ. ಹೀಗಾಗಿ ಅವರು ಪ್ರಪಂಚದಲ್ಲಿ ಎಲ್ಲಿಯೇ ಹೋದರೂ ಆ ಕೃಷ್ಣನ ಕಂಪು, ತಂಪು, ಸಂಪು ಹರಡುತ್ತಲೇ ಇರುತ್ತಾರೆ ಎಂದು ಶ್ರೀ ಶ್ರೀ ರವಿಶಂಕರ್​ ಹೇಳಿದರು. ಬಹಳ ಕಷ್ಟ ಅನುಭವಿಸಿ ವಿದೇಶದಲ್ಲೂ ಕೃಷ್ಣ ಮಂದಿರ ಸ್ಥಾಪಿಸಿದ್ದಾರೆ. ವಿಶ್ವದ ಜನರನ್ನು ಶ್ರೇಷ್ಠರನ್ನಾಗಿ ಮಾಡಬೇಕೆಂಬ ವೇದಗಳ ಆದೇಶವನ್ನು ಪಾಲಿಸುತ್ತಿದ್ದಾರೆ. ಇಲ್ಲಿಯ ಆಚಾರಗಳನ್ನೆಲ್ಲ ವಿದೇಶದಲ್ಲೂ ಅಳವಡಿಸಿ, ಆಚರಿಸುತ್ತಿರುವ ಕಾರ್ಯ ಶ್ಲಾನೀಯ. ಭಾರತದ ಜ್ಞಾನ, ಧ್ಯಾನ, ಗಾನವನ್ನು ಜಗತ್ತಿಗೆ ಹರಡಬೇಕೆಂದು ಪುತ್ತಿಗೆ ಶ್ರೀಗಳು ಪರಿಶ್ರಮ ಪಡುತ್ತಿದ್ದಾರೆ. ಕೃಷ್ಣನ ಸಂದೇಶವನ್ನು ಜಗತ್ತಿಗೆ ಸಾರುವ ಮಹತ್ತರ ಕ್ರಾಂತಿಯನ್ನೇ ಶ್ರೀಗಳು ಮಾಡಿದ್ದಾರೆ ಎಂದರು. ಕಿರಿಯ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net