ಶ್ರೀಸೋಮೇಶ್ವರ ರಥೋತ್ಸವ ಸಂಭ್ರಮ

lxr jatre
Published on

ಲಕ್ಷ್ಮೇಶ್ವರ: ಪಟ್ಟಣದ ಆರಾಧ್ಯದೈವ ಪುಲಿಗೆರೆಯ ಶ್ರೀಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸೋಮೇಶ್ವರನಿಗೆ ಭಕ್ತಿಯಿಂದ ನಮಿಸಿದರು. ಹಣ್ಣು-ಕಾಯಿ ನೈವೇದ್ಯ ಮಾಡಿಸಿಕೊಂಡು ಬಳಿಕ ರಥಕ್ಕೆ ಉಡಿ ತುಂಬಿ, ಹೊಸ ವಸ್ತ್ರಾಭರಣಗಳನ್ನಿರಿಸಿ ಪೂಜಿಸಿದ ದೃಶ್ಯ ಕಂಡು ಬಂದಿತು.

ಮಹಾರಥೋತ್ಸವಕ್ಕೆ ನಾಡಿನಾದ್ಯಂತ ಆಗಮಿಸಿದ್ದ ಭಕ್ತಗಣ ಸಾಕ್ಷಿಯಾಗಿತ್ತು. ಹರಹರ ಮಹಾದೇವ, ಶ್ರೀಸೋಮೇಶ್ವರ ಮಹಾರಾಜ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಭಕ್ತ ಸಮೂಹ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ನವ ದಂಪತಿಗಳು ತೇರಿನ ಕಳಸ ನೋಡಲು ಜಮಾಯಿಸಿದ್ದರು. ಮಹಾರಥೋತ್ಸವದ ಸಂದರ್ಭದಲ್ಲಿ ಶ್ರೀಸೋಮೇಶ್ವರ ದೇವಸ್ಥಾನದ ಜಾತ್ರಾ ಕಮಿಟಿ, ಸೇವಾ ಸಮಿತಿಯ ಸರ್ವ ಸದಸ್ಯರು, ಮುಖ್ಯ ಅರ್ಚಕರು, ಹಿರಿಯರು ನೇತೃತ್ವವಹಿಸಿ ನಿರ್ವಹಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಸಂಪ್ರದಾಯದಂತೆ ಲಕ್ಷ್ಮೀದೇವಿ ಪೂಜೆ, ರಥಪೂಜೆ ಮತ್ತು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಗುರುವಾರ ಸಂಜೆ 5.30ಕ್ಕೆ ಕಡುಬಿನ ಕಾಳಗ. ಶುಕ್ರವಾರ ಸಂಜೆ ಓಕಳಿ ಕಾರ್ಯಕ್ರದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net