

ನರಗುಂದ: ಪಟ್ಟಣದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ, ಲಿಂ. ಶ್ರೀಲೀಲಾಮೂರ್ತಿ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ 45ನೇ ಹಾಗೂ ಲಿಂ. ಶ್ರೀಕಿರಿಯ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ 13ನೇ ಪುಣ್ಯ ಸ್ಮರಣೋತ್ಸವ ಫೆ.19ರಿಂದ ಮಾ.1ರವರೆಗೆ ಶ್ರೀಮಠದ ಆವರಣದಲ್ಲಿ ನಡೆಯಲಿದೆ ಎಂದು ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ಶ್ರೀಮಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.19ರಿಂದ ಮಾ.1 ರವರೆಗೆ ಪ್ರತಿದಿನ ಸಂಜೆ 7.30 ರಿಂದ 8.30ರ ವರೆಗೆ ನವಲಗುಂದದ ಶ್ರೀಅಜಾತ ನಾಗಲಿಂಗ ಅಜ್ಜನ ಚರಿತ್ರೆ ಕುರಿತು ಪಟ್ಟಣದ ಬೆಣ್ಣಿ ಪೇಠೆಯ ಶ್ರೀಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ಆವರಣದಲ್ಲಿ ಪ್ರವಚನ, ಮಹಾಪ್ರಸಾದ ಸೇವೆ ನಡೆಯಲಿದೆ. ಬೂದಿಹಾಳದ ಶ್ರೀಗವಿಸಿದ್ಧೇಶ್ವರ ಶಾಸ್ತ್ರಿಗಳು ಪ್ರವಚನ ನೀಡುವರು. ಫೆ.26ರಂದು ಮಹಾ ಶಿವರಾತ್ರಿ ಜಾಗರಣೆ, ರಥವನ್ನು ಹೊರಗಡೆ ತರುವುದು. 27ರಂದು ಅರ್ಭಾಣ ಓಣಿಯ ಹಜರತ್ ಮೆಹಬೂಬಸುಭಾನಿ ದರ್ಗಾದಿಂದ ಶ್ರೀಮಠಕ್ಕೆ ತೇರಿನ ಕಳಸ, ಹಗ್ಗವನ್ನು ತರಲಾಗುವುದು. ಮಾ.1ರಂದು ಬೆಳಗ್ಗೆ 5.30ಕ್ಕೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, 6 ಗಂಟೆಗೆ ಜಂಗಮ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಚಾರ, ಬೆಳಗ್ಗೆ 10 ಗಂಟೆಗೆ ಪಟ್ಟಣದ ಹೊರಕೇರಿ ಶ್ರೀಬಸವೇಶ್ವರ ದೇವಸ್ಥಾನದಿಂದ ನಂದಿಕೋಲನ್ನು ಬರಮಾಡಿಕೊಳ್ಳುವುದು. ಸಂಜೆ 5 ಗಂಟೆಗೆ ರಥೋತ್ಸವ, ರಾತ್ರಿ 8 ಗಂಟೆಗೆ ಧರ್ಮಸಭೆ ಜರುಗಲಿದೆ ಎಂದು ತಿಳಿಸಿದರು.
ರವಿ ಹುಂಬಿ, ವೆಂಕಟಾಪೂರದ ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಉಪಸ್ಥಿತರಿದ್ದರು.