ಶ್ರೀ ಸಿದ್ಧಾರೂಢ ಸ್ವಾಮೀಜಿ ಅಂಚೆ ಚೀಟಿ ಬಿಡುಗಡೆ

IMG-20240706-WA0025.jpg
Published on

ಹುಬ್ಬಳ್ಳಿ: ಸಂತ- ಮಹಾಂತರಿಂದಾಗಿ ಊರುಗಳಿಗೆ ಮಹತ್ವ ಬರುತ್ತದೆ. ಸದ್ಗುರು ಶ್ರೀ ಸಿದ್ಧಾರೂಢರು ನಡೆದಾಡಿದ ಹುಬ್ಬಳ್ಳಿಯು "ಸಿದ್ಧಾರೂಢರ ಹುಬ್ಬಳ್ಳಿ' ಎಂದೇ ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಭಗವಂತನ ಸಾಕ್ಷಾತ್ಕಾರವೇ ಆಗಿದ್ದ ಅವರ ಸ್ಮರಣೆಯಲ್ಲಿ ಅಂಚೆ ಚೀಟಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ ಸಹಯೋಗದಲ್ಲಿ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಶ್ರೀಗಳ ಹೆಸರಿನಲ್ಲಿ ಅಂಚೆ ಚೀಟಿ ಹೊರತರಬೇಕೆಂಬ ಬೇಡಿಕೆಯು ಬಹಳ ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಶ್ರೀಗಳ ಅನುಗ್ರಹ ಇತ್ತು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಇದೀಗ ಕಾರ್ಯರೂಪಕ್ಕೆ ಬಂದಿದೆ ಎಂದರು.

ಭಾರತ ಉಳಿದಿರುವುದೇ ಆಧ್ಯಾತ್ಮದ ತಳಹದಿ ಮೇಲೆ. ಧರ್ಮ ಎನ್ನುವುದು ಜೀವನದ ಪದ್ಧತಿ ಎಂಬುದನ್ನು ಶ್ರೀ ಸಿದ್ಧಾರೂಢರು ತೋರಿಸಿಕೊಟ್ಟಿದ್ದಾರೆ. ಐದು ವರ್ಷದವರಿದ್ದಾಗಲೇ ಓಂಕಾರ ಪದದ ಅರ್ಥವನ್ನು ಹೇಳುವ ಮೂಲಕ ಅವರು ಭಗವಂತನ ಸ್ವರೂಪ ಎಂಬುದನ್ನು ಸಾರಿದ್ದರು. ಜನರಿಗೆ ಆಧ್ಯಾತ್ಮವನ್ನು ಸಹಜವಾಗಿ ತಿಳಿಸಿದವರು ಸಿದ್ದಾರೂಢರು ಎಂದರು.

ಟ್ರಸ್ಟ್ ಕಮಿಟಿಯವರು ಇಲ್ಲೊಂದು ಪ್ರಸಾದ ನಿಲಯ ಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳಿಸಿದರೆ ಕೇಂದ್ರದ ನೆರವಿನೊಂದಿಗೆ ಈಡೇರಿಸಲು ಸಿದ್ಧ ಎಂದು ಭರವಸೆ ನೀಡಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇದು ದೇಶದಲ್ಲಿ ಅಪರೂಪದ ಕ್ಷೇತ್ರ. ಜಾತಿ, ಮತ, ಪಂಥ ಹಾಗೂ ಧರ್ಮ ಯಾವುದೂ ಇಲ್ಲಿ ಸುಳಿಯುದಿಲ್ಲ. ದೇಶದ ತುಂಬ ಸಿದ್ಧಾರೂಢರ ಪ್ರಭಾವ ಹರಡಿದೆ. ಇದೀಗ ಅಂಚೆ ಚೀಟಿ ಬಿಡುಗಡೆ ಆಗಿರುವುದು ಖುಷಿಯ ಸಂಗತಿ ಎಂದರು.

ಶ್ರೀಮಠದ ಆವರಣದಲ್ಲಿ ಪ್ರಸಾದ ನಿಲಯ ಆಗಬೇಕು ಎಂಬುದು ಎಲ್ಲರ ಬಯಕೆ. ಇದನ್ನು ಮಾಡಿಕೊಡಲು ರಾಜ್ಯ ಸರ್ಕಾರವೂ ಸಿದ್ಧವಿದೆ. ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಅಡಿ ಇದನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬರುವ ಶಿವರಾತ್ರಿ ವೇಳೆಗೆ ಇದಕ್ಕೆ ಅಡಿಗಲ್ಲು ಹಾಕಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸದ್ಗುರುವಿನ ಚಿಂತನೆಗಳು ಧರ್ಮದ ಚೌಕಟ್ಟಿನಿಂದ ಹೊರಗೆ ಇರುವಂತವಾಗಿವೆ. ಪರಮಾತ್ಮ ನಮ್ಮ ಒಳಗಡೆ ಇದ್ದಾನೆ ಎಂದು ತಿಳಿಸಿಕೊಟ್ಟವರು. ಶುದ್ಧ ಅತಃಕರಣದ ಭಕ್ತಿಯಿಂದ ಸಿದ್ಧಾರೂಢ ಮಠಕ್ಕೆ ಭಕ್ತನಾಗಿ ಬಂದಿರುವೆ ಎಂದರು.

ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಶ್ರೀಸಿದ್ಧಾರೂಢರು ನಾವೆಲ್ಲ ಒಂದು ಎಂದು ಪ್ರಭಾವ ಬೀರಿದವರು. ನಾವೆಲ್ಲರೂ ನೆಮ್ಮದಿಯ ಬದುಕು ಜೀವಿಸುತ್ತಿದ್ದರೆ ಅದಕ್ಕೆ ಕಾರಣರು ಸಿದ್ಧಾರೂಢರು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಭಾಗದಲ್ಲಿ ಶ್ರೀಮಠವು ಧರ್ಮಕ್ಷೇತ್ರವಾಗಿ ಹೊರಹೊಮ್ಮಿದೆ. ಮಠ ಹೇಗಿರಬೇಕು ಎಂಬುದಕ್ಕೆ ಸಾಯಾಗಿದೆ. ಇಲ್ಲಿಗೆ ಬೇಕಾದ ಇನ್ನಷ್ಟು ಸವಲತ್ತುಗಳನ್ನು ಕಲ್ಪಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಇಂಚಲ ಸಾಧು ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ಶಿವಾನಂದಭಾರತಿ ಸ್ವಾಮೀಜಿ, ಮಹಾಲಿಂಗಪುರದ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಸ್ವಾಮೀಜಿ, ಅಣ್ಣಿಗೇರಿಯ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಎಂ.ಆರ್. ಪಾಟೀಲ, ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರಗಮ್ಮ ಬಿಜವಾಡ, ಪಾಲಿಕೆ ಸದಸ್ಯೆ ಮಂಗಳಾ ಗೌರಿ, ಮಾಜಿ ಶಾಸಕ ನಾಗರಾಜ ಛಬ್ಬಿ, ಶ್ರೀ ಮಠದ ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ, ಮಹೇಂದ್ರ ಸಿಂಘಿ, ಬಾಳು ಮಗಜಿಕೊಂಡಿ, ರಂಗಾ ಬದ್ದಿ, ಈರಣ್ಣ ತುಪ್ಪದ ಇತರರು ಉಪಸ್ಥಿತರಿದ್ದರು.

ಧರ್ಮದರ್ಶಿ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಕರ್ನಾಟಕ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net