ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀ ಶಾರದೆ

sri sharada
ಜಗತ್ಪ್ರಸೂತಿಕಾ ಅಲಂಕಾರದಲ್ಲಿ ವಿರಾಜಮಾನಳಾದ ಶೃಂಗೇರಿ ಶಾರದೆ.
Published on

ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠದ ಶರನ್ನವರಾತ್ರಿ ಮಹೋತ್ಸವ ಹಿನ್ನೆಲೆಯಲ್ಲಿ ಬುಧವಾರ ಅಮಾವಾಸ್ಯೆ ಪ್ರಯುಕ್ತ ಶ್ರೀ ಶಾರದೆಗೆ ಮಹಾಭಿಷೇಕ ನೆರವೇರಿಸಲಾಯಿತು. ಜಗನ್ಮಾತೆಗೆ ವಿವಿಧ ಲ-ಪಂಚಾಮೃತ ಅಭಿಷೇಕದ ಬಳಿಕ ಮೂಲಬಿಂಬದ ಹರಿದ್ರಾದರ್ಶನ, ನೀರಾಜನ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಬಾರಿ ಶ್ರೀಸೂಕ್ತ ಪಠಣದಿಂದ ಅಭಿಷೇಕ ನೆರವೇರಿಸಲಾಯಿತು. ಜಗದ್ಗುರುಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.

ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಕಂಗೊಳಿಸಿದಳು. ಶ್ರೀ ಶಾರದೆ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ. ನೀನು ಮಗುವಿನಂತೆ. ನೀನು ನನ್ನನ್ನು ಭಜಿಸುವಿಯಾದರೆ ಈ ಮಗುವಿನಂತೆ ಸದಾ ನಿನ್ನನ್ನು ರಕ್ಷಿಸುತ್ತೇನೆ ಎಂದು ಭಕ್ತನನ್ನು ಕುರಿತು ಕೇಳುತ್ತಿದ್ದಾಳೋ ಎಂಬಂತೆ ಭಾಸವಾಗುವ ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು.
ಮಠದ ನರಸಿಂಹವನದ ಅಷ್ಠಾನ ಮಂದಿರದಲ್ಲಿ ಬುಧವಾರ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಆರಾಧನಾ ಮಹೋತ್ಸವವನ್ನು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿವಿಧಾನಗಳ ಬಳಿಕ ವಿಶೇಷ ಪೂಜೆ ನೆರವೇರಿಸಿದರು.
ಶ್ರೀ ಶಾರದಾಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮ ಅ.3ರಂದು ನೆರವೇರಲಿದೆ. ಜಗನ್ಮಾತೆ ಹಂಸವಾಹನಾಲಂಕಾರದಲ್ಲಿ ವಿರಾಜಮಾನಳಾಗಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಸಂಜೆ 6 ಗಂಟೆಗೆ ನೆರವೇರಲಿರುವ ಬೀದಿ ಉತ್ಸವಕ್ಕೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು ಹಾಗೂ ಸಂಘಸಂಸ್ಥೆಗಳು ಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net