

ರಾಯಚೂರು ಜೀವ ಇದ್ದರೆ, ಏನನ್ನಾದರೂ ಸಾಧಿಸ ಬಹುದಾಗಿದೆ. ಆದರೆ ಜೀವವನ್ನು ನೀಡಲು ರಕ್ತದಾನವೊಂದೇ ಮಾರ್ಗವಾಗಿದೆಂದು ಕಿಲ್ಲೇ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಅನ್ನದಾನ, ಭೂಮಿ ದಾನ ಸೇರಿದಂತೆ ಹಲವು ದಾನಗಳು ಇಂದು ಸಮಾಜದಲ್ಲಿ ಶ್ರೀಮಂತವಾಗಿದ್ದು, ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗವು ಅತ್ಯಂತ ಹಿಂದುಳಿದ ಭಾಗವೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದು, ಈ ಭಾಗದಲ್ಲಿ ಹೆಚ್ಚಾಗಿ ರಕ್ತ ಹೀನತೆ ಪ್ರಕರಣಗಳನ್ನು ಕಾಣುತ್ತೇವೆ. ಈ ಭಾಗದಲ್ಲಿ ರಕ್ತದ ಕೊರತೆಯನ್ನು ನೀಗಿಸಲು ರಕ್ತದಾನ ಶಿಬಿರಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದರು.
ಹೆರಿಗೆ ಸಮಯದಲ್ಲಿ ಗರ್ಭಿಣೀಯರಿಗೆ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು. ಆರೋಗ್ಯ ಕ್ಷೇತ್ರದ ಎಲ್ಲಾ ಸಿಬ್ಬಂದಿಗಳೂ ಕೂಡ ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ನಗರದ ಐದು ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯಾ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು, ಜಿಲ್ಲೆಯ ಜನರಲ್ಲಿ ರಕ್ತದಾನದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಪ್ರತಿಯೊಬ್ಬರು ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ, ಶಾರದಾ, ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ವೆಂಕಟೇಶ ನಾಯಕ, ವೈದ್ಯರಾದ ಶೈಲೇಶ ಅಮರಖೇಡ, ಜಯಪ್ರಕಾಶ ಪಾಟೀಲ್ ಬೆಟ್ಟದೂರು, ರಿಮ್ಸ್ ಅಧಿಕಾರಿ ಡಾ.ಬಸವರಾಜ, ರಾಜಶೇಖರ ಪಾಟೀಲ್ ಮುದ್ದೂರು ಸೇರಿದಂತೆ ಅನೇಕರು ಇದ್ದರು.