ಶ್ರೀ ಶಾಂತಲಿಂಗ ಸ್ವಾಮೀಜಿ ವರ್ಧಂತ್ಯುತ್ಸವ ಬುಧವಾರ

28 upbr 1-Amminbavi swamiji
Published on

ಉಪ್ಪಿನಬೆಟಗೇರಿ: ಸಮೀಪದ ಧಾರವಾಡ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ 90ನೇ ವರ್ಧಂತಿ ಸಮಾರಂಭ ಆ. 30ರಂದು ರಾತ್ರಿ 8 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. ಬೈಲಹೊಂಗಲ ತಾಲೂಕಿನ ದೊಡವಾಡ ಹಿರೇಮಠದ ಶ್ರೀ ಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭ ಉದ್ಘಾಟಿಸುವರು. ಹಿರಿಯ ಶ್ರೀಗಳು ತಮ್ಮ 5ನೇ ವರ್ಷದಲ್ಲಿಯೇ (1939) ಸನ್ಯಾಸ ದೀಕ್ಷೆಗೆ ಒಳಗಾಗಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುತ್ವಾಧಿಕಾರ ಹೊಂದಿದ್ದು, ತಮ್ಮ ಸುದೀರ್ಘ 89 ವರ್ಷಗಳ ಸನ್ಯಾಸದ ಬದುಕಿನಲ್ಲಿ ನಿರಂತರ ಶಿವಪೂಜಾ ತಪೋನುಷ್ಠಾನ ಮಾಡಿ ಧರ್ಮ ಜಾಗೃತಿಗೆ ಶ್ರಮಿಸಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಂಕುಲದ ಸಹಕಾರದೊಂದಿಗೆ 1965ರಲ್ಲಿ ಶ್ರೀ ಶಾಂತೇಶ್ವರ ಪೌಢ ಶಾಲೆ ಹಾಗೂ 1991ರಲ್ಲಿ ಕನ್ನಡ ಪ್ರಾಥಮಿಕ ಶಾಲೆ ಪ್ರಾರಂಭಿಸುವ ಮೂಲಕ ವಿದ್ಯಾ ವಿಕಾಸಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ.

ಉಡಿ ತುಂಬುವ ಕಾರ್ಯಕ್ರಮ: ಆದರ್ಶ ಶಿಕ್ಷಕ, ಅನುಭಾವಿ ದಿ. ವೀರಯ್ಯ ಯರಗಂಬಳಿಮಠ ಹಾಗೂ ದಿ. ಈರಮ್ಮ ಯರಗಂಬಳಿಮಠ ಅವರ ಸಂಸ್ಮರಣೆಯಲ್ಲಿ ಅಮ್ಮಿನಬಾವಿ ಗ್ರಾಮದ ಶೋಭಾ ಯರಗಂಬಳಿಮಠ ಅವರಿಂದ 108 ಮುತೆôದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ವರ್ಧಂತಿಯ ದಿನ ಅಮ್ಮಿನಬಾವಿ ಗ್ರಾಪಂ ಮಾಜಿ ಅಧ್ಯಕ್ಷ ದಿ. ಬಸಯ್ಯ ಗುಡಿ ಅವರ ಸ್ಮರಣಾರ್ಥ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ದಾಸೋಹ ಸೇವೆ ಸಲ್ಲಿಸುವರು. ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಶಿರಸಿ ಹಾಗೂ ಮಹಾರಾಷ್ಟದ ಗಡಹಿಂಗ್ಲಜದಿಂದಲೂ ಭಕ್ತ ಸಮೂಹ ಪಾಲ್ಗೊಳ್ಳುವರು ಎಂದು ಹಿರಿಯ ಶ್ರೀಗಳ ವರ್ಧಂತಿ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net