

ಬೆಳಗಾವಿ: ಮಾರಕ ಕರೊನಾ ವೈರಸ್ ದೇಶದ ಹಲವೆಡೆ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಗೆ ಆಗಮಿಸುವ ಭಕ್ತರು ಯಾತ್ರೆ ಸ್ಥಗಿತಗೊಳಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕು ಮಾರಣಾಂತಿಕವಾಗಿದೆ ಎಂದು ವೈದ್ಯಲೋಕ ತಿಳಿಸಿದೆ. ಸದ್ಯ ವೈರಸ್ಗೆ ಯಾವುದೇ ಔಷಧ ಇಲ್ಲದ ಕಾರಣ ಇದು ಹರಡದಂತೆ ನಾವೆಲ್ಲರೂ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮ ರದ್ದು: ಜಾತ್ರೆಗೆ ಬರುವ ಭಕ್ತರೆಲ್ಲರ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರೀಶೈಲ ಪೀಠದಿಂದ ಮಾ. 19 ರಿಂದ 23ರ ವರೆಗೆ ಐದು ದಿನ ಮಲ್ಲಯ್ಯನ ಭಕ್ತರ ಬೃಹತ್ ಸಮಾವೇಶ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. 21ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ. ಈ ಮಾರಣಾಂತಿಕ ಕರೊನಾ ಕಾರಣದಿಂದ ಈ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಶ್ರೀಶೈಲ ಸ್ವಾಮೀಜಿ ತಿಳಿಸಿದರು.