‘ಸಂಕಲ್ಪ’ ಸಿದ್ಧಿಸುವ ಧನ್ವಂತರಿ ಸನ್ನಿಧಿ- ದೇವಾಲಯ ದರ್ಶನ

Published on

ಶ್ರೀ ಸತ್ಯಸಂಕಲ್ಪ ತೀರ್ಥರ 186ನೇ ಆರಾಧನೆ ಇಂದು * ಧನ್ವಂತರಿ ಸನ್ನಿಧಿಯಲ್ಲಿ ಇಂದು ಸಾವಿರಾರು ಭಕ್ತ ಜನ ಸಂಗಮ 

ಎ.ಆರ್. ರಘುರಾಮ ಮೈಸೂರು

ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳೊಂದಿಗೆ ದೇಶದ ಯತಿ ಪರಂಪರೆಗೂ ಮೈಸೂರು ತನ್ನದೇ ಆದ ಕೊಡುಗೆ ನೀಡಿದೆ. ದ್ವೈತ, ಅದ್ವೈತ ಸಂಸ್ಥಾನ, ಮಠ- ಮಾನ್ಯಗಳಿಗೆ ಮೈಸೂರು ಅದ್ವಿತೀಯ ಕಾಣಿಗೆ ಸಮರ್ಪಣೆ ಮಾಡಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಈ ದಿಸೆಯಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಉತ್ತರಾದಿ ಮಠದ ಸನ್ಯಾಸಿಗಳ ಅಗ್ರ ಪಂಕ್ತಿಯಲ್ಲಿ ಎರಡು ಪುರಾತನ ವೃಂದಾವನ ಸನ್ನಿಧಿ ನಗರದಲ್ಲಿದೆ. ಅರಮನೆ ಸಮೀಪವೇ ಗುರುಮನೆ ಇದೆ. ಆಚಾರ, ವಿಚಾರ, ಶಾಸ್ತ್ರ, ಸಂಪ್ರದಾಯದ ಅನುಷ್ಠಾನ ಕೇಂದ್ರವಾಗಿದೆ. ದ್ವೈತ ಸಿದ್ಧಾಂತ ಪ್ರತಿಪಾದನಾ ಕೇಂದ್ರವಾಗಿ ಶತಮಾನಗಳಿಂದ ಖ್ಯಾತಿ ಪಡೆದಿದೆ. ಇದುವೇ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ಮೂಲ ವೃಂದಾವನ ಸನ್ನಿಧಿ.

Sri Satya Sankalpa Theertha Swamiji  Moola Vrundavana

ವೃಂದಾವನ ಕ್ಷೇತ್ರದಲ್ಲಿ ಗಂಗಾ ನೆಲೆ

  • ಆಚಾರ್ಯ ಮಧ್ವರ ನೇರ ಪರಂಪರೆಯ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ಮೂಲ ವೃಂದಾವನಗಳು ಈ ದೇಗುಲದಲ್ಲಿ ಇವೆ. 1830 ರಿಂದ 1840 ರವರೆಗೆ ಆಚಾರ್ಯ ಮಧ್ವರ ಪರಂಪರೆಯ ವೇದಾಂತ ಸಾಮ್ರಾಜ್ಯವನ್ನಾಳಿದರು ಶ್ರೀ ಸತ್ಯಸಂಕಲ್ಪರು. ಅಖಂಡ ಭಾರತ ಸಂಚಾರ ಮಾಡಿ, ಹಲವು ಗ್ರಂಥ ರಚಿಸಿದ್ದರು. ತಪಸ್ವಿ ಮತ್ತು ಜ್ಞಾನಿಗಳಾಗಿದ್ದ ಅವರು ಬರಗಾಲದ ಸಂದರ್ಭ 12 ವರ್ಷ ಜಾತಿ, ಮತ ತಾರತಮ್ಯ ಮೀರಿ ಕರ್ಜಗಿಯಲ್ಲಿ ಸಕಲರಿಗೂ ಅನ್ನದಾನ ಮಾಡಿದರು. ಹಾಗಾಗಿಯೇ ಅವರ ಸನ್ನಿಧಿಯಲ್ಲಿ ಇಂದಿಗೂ ನೂರಾರು ಜನರಿಗೆ ಅನ್ನದಾನ ನಡೆಯುತ್ತಿದೆ. ದೇಶಾದ್ಯಂತ ದಿಗ್ವಿಜಯ ಸಾಧಿಸಿ ಮೈಸೂರಿಗೆ ಪದಾರ್ಪಣೆ ಮಾಡಿದರು. 10ನೇ ಚಾಮರಾಜ ಒಡೆಯರ್ ಪ್ರಾರ್ಥನೆಯಂತೆ ಅರಮನೆಯಲ್ಲಿ ಶ್ರೀ ಮೂಲ ರಾಮದೇವರ ಪೂಜೆ ನೆರವೇರಿಸಿ ರಾಜನಿಗೆ ಧರ್ಮ ಬೋಧನೆ ಮಾಡಿದರು. ಮಹಾರಾಜರೇ ಅರಮನೆ ಸಮೀಪ ನಿರ್ಮಿಸಿಕೊಟ್ಟ ಗುರುಮನೆಯಲ್ಲಿ ಕೆಲಕಾಲ ನೆಲೆ ನಿಂತರು. ಇದು ಉತ್ತರಾದಿ ಮಠದ ಶಾಖೆ ಆಯಿತು. ಶ್ರೀ ಸತ್ಯಸಂತುಷ್ಟ ತೀರ್ಥರನ್ನು ಉತ್ತರಾಧಿಕಾರಿ (30ನೇ ಯತಿ) ಯಾಗಿ ನೇಮಿಸಿ ಇಲ್ಲೇ 1840ರಲ್ಲಿ ವೃಂದಾವನಸ್ಥರಾದರು. ಇವರ ಜ್ಞಾನ ಮತ್ತು ವೈರಾಗ್ಯದ ಪ್ರತೀಕವಾಗಿ ಇಂದಿಗೂ ವೃಂದಾವನದ ಸುತ್ತ ನೀರಿನ ಒರತೆ (ಗಂಗಾ ನೆಲೆ) ಬರುವುದನ್ನು ಕಾಣಬಹುದು.ವೃಂದಾವನ ಭೂಷಿತರಾಗಿ ಇಂದಿಗೆ 185 ವಸಂತ ಪೂರ್ಣವಾಗಿದೆ. ಜು.10 ರಂದು 186ನೇ ಆರಾಧನೋತ್ಸವ ವಿಜೃಂಭಿಸಲಿದೆ.
  • ಸತ್ಯಧರ್ಮಾಬ್ಧಿ ಸಂಭೂತಃ
    ಚಿಂತಾಮಣಿ ವಿಜೃಂಭಿತಃ
    ಸತ್ಯಸಂಕಲ್ಪ ಕಲ್ಪದ್ರುಃ
    ಕಲ್ಪಯೇತ್ ಕಾಮಧುಕ್ ಮಮ ... ಎಂಬ ಶ್ಲೋಕ ಹೇಳಿಕೊಂಡು  ಸಾವಿರಾರು ಭಕ್ತರು ನಿತ್ಯವೂ  3- 5 ಪ್ರದಕ್ಷಿಣೆ ಮಾಡುತ್ತಾರೆ. ಏನೂ ತಿಳಿಯದವರು, ಶ್ಕೆಲೋಕವೂ ಬಾರದವರೂ, ವಿವಿಧ ಜಾತಿ, ಮತ, ಸಮುದಾಯದವರೂ ದಿನವೂ ಭಕ್ತಿಯಿಂದ ಗುರುಗಳನ್ನು ಸ್ಮರಣೆ ಮಾಡಿಕೊಂಡು ನಮಸ್ಕಾರ, ಪ್ರದಕ್ಷಿಣೆ ಹಾಕುತ್ತಾರೆ. ಇಲ್ಲಿ ಭಕ್ತಿಯೇ ಪ್ರಧಾನ.  ಹಾಗಾಗಿ ನಮಿಸಿದವರ ಮನೋಸಂಕಲ್ಪ ಈಡೇರುತ್ತದೆ. ವಿವಿಧ ಕಾಯಿಲೆ ದೂರಾಗುತ್ತವೆ.  ಹಲವು ಆಸ್ಪತ್ರೆಗಳಲ್ಲಿ ವಾಸಿಯಾಗದ ರೋಗ ಿಲ್ಲಿನ ಸೇವೆಯಿಂದ ದೂರವಾದ ಹಲವು ಉದಾಹರಣೆ ಇವೆ.  ರೋಗ ಬಂದು ಜೀವನದ  ಕೊನೇ ಘಟ್ಟದಲ್ಲಿದ್ದ ಹಲವರು ಬದುಕುಳಿದ ಪವಾಡವೂ ಇದೆ.ಯಾವುದೇ ಭೇದವಿಲ್ಲದೇ ಎಲ್ಲರೂ ಸೇವೆ ಸಮರ್ಪಿಸಲು ಮುಕ್ತ ಅವಕಾಶವಿದೆ ಎನ್ನುತ್ತಾರೆ ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ.

* ದೇಶದಲ್ಲೇ ಅತಿದೊಡ್ಡ ಧನ್ವಂತರಿ ಪ್ರತಿಮೆ ಮಾಧ್ವ ಪರಂಪರೆಯ ಇಬ್ಬರು ಯತಿಗಳ ವೃಂದಾವನ ಆಲಯದಲ್ಲಿ ನಾಡಿನ ಕ್ಷೇಮಪಾಲಕ ಧನ್ವಂತರಿಯೂ ನೆಲೆ ನಿಂತಿದ್ದಾನೆ. ದೇಶದಲ್ಲೇ ಅತಿದೊಡ್ಡ ಧನ್ವಂತರಿ ಪ್ರತಿಮಾ ಸನ್ನಿಧಿ ಇದು ಎಂಬ ಖ್ಯಾತಿಯೂ ಇದೆ. ಇದು ಈ ಮಣ್ಣಿನ ಸುಕೃತ. ಭಕ್ತ ಗಣಕ್ಕೆ ಆರೋಗ್ಯಪ್ರದನ ಅರ್ಚನೆ, ಆರಾಧನೆ ಇಲ್ಲಿ ಅನವರತ. ದಿನವೂ ನೂರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಗುರು-ದೇವರ ದರ್ಶನ ಪಡೆದು ಯಥಾ ಶಕ್ತಿ ಸೇವೆ ಸಮರ್ಪಿಸಿ ಭಕ್ತಿ-ಭಾವ ಮೆರೆಯುತ್ತಿದ್ದಾರೆ. ಧನ್ವಂತರಿ ಪ್ರತಿಷ್ಠಾಪನೆಗೊಂಡು 4 ಸಂವತ್ಸರ ಸಂದಿದೆ. ಮಹಾವಿಷ್ಣುವು ಸಮುದ್ರ ಮಥನ ಕಾಲದಲ್ಲಿ ಅಮೃತ ಕಲಶದೊಂದಿಗೆ ಧನ್ವಂತರಿ ಅವತಾರ ತಾಳಿದ. ಈತನೇ ಜಗತ್ತಿನ ಜೀವಿಗಳ ಆರೋಗ್ಯ ಪಾಲಕ ಎಂದಿವೆ ಪುರಾಣಗಳು. ಧನ್ವಂತರಿ ಸುಪ್ರಭಾತವೂ ಇದನ್ನೇ ಪುಷ್ಟೀಕರಿಸಿದೆ. ಧನ್ವಂತರಿಯೇ ಆಯುರ್ವೇದದ ಪ್ರಥಮ ಆಚಾರ್ಯ. ಶ್ರೀ ಮಧ್ವರು ತಂತ್ರಸಾರ ಸಂಗ್ರಹದಲ್ಲಿ ವರ್ಣಿಸಿದಂತೆ ಏಕಶಿಲಾ ಮೂರ್ತಿಯನ್ನು ಮೈಸೂರಿನಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮರು 2021ರ ಜೂನ್ 20ರಂದು ಪ್ರತಿಷ್ಠಾಪಿಸಿದರು.‘ವಿಶ್ವಕ್ಕೆ ಅಂಟಿದ ಮಹಾಮಾರಿ ಕರೋನಾ ತೊಲಗಲಿ’ ಎಂದು ಅವರು ಮಾಡಿದ ‘ಸಂಕಲ್ಪ’ ಸತ್ಯ ಸನ್ನಿಧಿಯಲ್ಲಿ ಫಲಿಸಿತು. 8 ಅಡಿ ಎತ್ತರದ ಧನ್ವಂತರಿ, ಒಂದು ಕೈಯಲ್ಲಿ ಅಮೃತ ಕಲಶ, ಇನ್ನೊಂದು ಕೈಯಲ್ಲಿ ಅಭಯ ನೀಡುತ್ತಾ ಪದ್ಮಾಸನದಲ್ಲಿ ಕುಳಿತಿರುವುದು ವಿಶೇಷ.

DHANVANTARI
DHANVANTARI

ವಿಶೇಷ ಚಟುವಟಿಕೆಗಳು:

ಸನ್ನಿಧಾನದಲ್ಲಿ ಪ್ರತಿನಿತ್ಯವೂ ತಂತ್ರಸಾರೋಕ್ತ ಪೂಜೆಯೊಂದಿಗೆ ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ಭಾನುವಾರ ಕ್ಷೀರಾಭಿಷೇಕ, ರೇಷ್ಮೆವಸ್ತ್ರ ಸಮರ್ಪಣೆ, ಪುಷ್ಪಲಂಕಾರ, ಲೋಕ ಕಲ್ಯಾಣಕ್ಕಾಗಿ ಧನ್ವಂತರಿ ಯಾಗ, ಸಂಜೆ ರಜತ ಪಲ್ಲಕ್ಕಿ ಉತ್ಸವ, ಜೇಷ್ಠ ಶುಕ್ಲ ದಶಮಿ ಧನ್ವಂತರಿ ಪ್ರತಿಷ್ಠಾಪನೋತ್ಸವ ನೆರವೇರುತ್ತದೆ.

ಪೂಜೆ, ಗಾಯನ- ನಾಟಕ:

ಶ್ರೀ ಸತ್ಯಸಂಕಲ್ಪ ತೀರ್ಥರ 186ನೇ ಆರಾಧನೋತ್ಸವ ಜು. 10 ಮತ್ತು 11ರಂದು ಸಂಪನ್ನಗೊಳ್ಳಲಿದೆ. ಬೆಳಗ್ಗೆ 6ಕ್ಕೆ ಮೂಲ ವೃಂದಾವನಕ್ಕೆ ವಿಶೇಷ ಅಭಿಷೇಕ, 8ಕ್ಕೆ ಪಂಚಾಮೃತ, 10ಕ್ಕೆ ಅಲಂಕಾರ, ವಿಶೇಷ ಪೂಜೆ ಮತ್ತು ನೈವೇದ್ಯ ಸಮರ್ಪಣೆಗೊಳ್ಳಲಿದೆ. 10ರ ಸಂಜೆ 6ಕ್ಕೆ ಖ್ಯಾತ ಗಾಯಕ ಮೈಸೂರು ರಾಮಚಂದ್ರಾಚಾರ್ಯರಿಂದ ದಾಸವಾಣಿ, 11ರಂದು ಯುವಾತ್ಮ ತಂಡದಿಂದ ಸತ್ಯ ಸಂಕಲ್ಪ ವಿಜಯ ನಾಟಕವಿದೆ.

 ಚೇತೋಹಾರಿ ಯುವಾತ್ಮಾ ತಂಡ ಧರ್ಮ ಮಾರ್ಗದಲ್ಲಿ ಸಾಗುವಂತೆ ಯುವಜನರನ್ನು ಪ್ರೇರೇಪಿಸಲು ಶ್ರೀ ಸತ್ಯಾತ್ಮತೀರ್ಥರ ಸಂಕಲ್ಪದಂತೆ 2 ವರ್ಷದ ಹಿಂದೆ ಕಟ್ಟಿದ ರಾಷ್ಟ್ರವ್ಯಾಪಿ ಸಂಘಟನೆ ‘ಯುವಾತ್ಮಾ’ ಮೈಸೂರಿನ ಶಾಖಾ ಮಠದಲ್ಲೂ ಕ್ರಿಯಾಶೀಲವಾಗಿದೆ. 80ಕ್ಕೂ ಹೆಚ್ಚು ಯುವಜನರು ಜಿಲ್ಲಾ ತಂಡದಲ್ಲಿದ್ದಾರೆ. ತಿಂಗಳಿಗೊಂದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ಒಗ್ಗೂಡು ತ್ತಾರೆ. ಆಧುನಿಕ ಶಿಕ್ಷಣ ಪಡೆದರೂ ಯುವಕರು ಸನಾತನ ಸಂಸ್ಕೃತಿಯ ಪ್ರತೀಕವಾಗಿರಬೇಕು ಎಂಬ ಸಂಕಲ್ಪವೂ ಈಡೇರುತ್ತಿದೆ ಎನ್ನುತ್ತಾರೆ ಶ್ರೀಮಠದ ಸಿಇಒ ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ.

ಮಾನವ ಜನ್ಮ ಪಡೆದ ಎಲ್ಲರೂ ರೋಗ ಮುಕ್ತರಾಗಿ, ಧರ್ಮ ಮಾರ್ಗದಲ್ಲಿ ಜೀವನ ನಡೆಸಬೇಕು. ಜಗತ್ತು ಸೌಖ್ಯದಿಂದ ಇರಬೇಕು ಎಂದರೆ ಅದಕ್ಕೆ ಧನ್ವಂತರಿ ಕಾರುಣ್ಯ ಬೇಕು. ಅದಕ್ಕಾಗಿಯೇ ಸಾಂಸ್ಕೃತಿಕ ರಾಜಧಾನಿಯಲ್ಲಿ ಧನ್ವಂತರಿ ನೆಲೆ ನಿಂತಿದ್ದಾನೆ. ನಮ್ಮ ಮಠದ ಪರಂಪರೆಯ ಇಬ್ಬರು ಪೂಜ್ಯರ ಮೂಲ ವೃಂದಾವನ ಪ್ರಾಂಗಣದಲ್ಲಿರುವ ಪರಮಾತ್ಮ ಸಮಸ್ತರಿಗೂ ಸ್ವಾಸ್ಥೃ ಅನುಗ್ರಹಿಸಲಿ. > ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ SRI Satyatma Theertha RU

Sri Dhanvantari Mandira- Mysore- Uttaradi MUTT
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net