ಫೆ.1ರಿಂದ 9ರ ತನಕ ಜಾತ್ರೋತ್ಸವ : ಪಂಜ ಸಾವಿರ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ

New Project (22)
Published on

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಪಂಜ ಸಾವಿರ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.1ರಿಂದ 9ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. 1ರಂದು ರಾತ್ರಿ ಧ್ವಜಾರೋಹಣ ನಡೆದು ಜಾತ್ರೆ ಪ್ರಾರಂಭವಾಗಲಿದೆ. 6ರಂದು ಬ್ರಹ್ಮರಥೋತ್ಸವ ನೆರವೇರಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.

1ರಂದು ಬೆಳಗ್ಗೆ ಶ್ರೀರುದ್ರ ಹವನ, ವೇದ ಪಾರಾಯಣ, ಗರಡಿ ಬೈಲಿನಲ್ಲಿರುವ ಮೂಲ ನಾಗನಕಟ್ಟೆಯಲ್ಲಿ ಆಶ್ಲೇಷ ಬಲಿ ಪೂಜೆ, ಪ್ರಸಾದ ವಿತರಣೆ, ದೇಗುಲದಲ್ಲಿ ದೇವರಿಗೆ ಮಹಾಪೂಜೆ, ಸಂಜೆ ಕ್ಷೇತ್ರದ ತಂತ್ರಿಗಳ ಆಗಮನ, ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಧ್ವಜಾರೋಹಣ, ಮಹಾಪೂಜೆ ನೆರವೇರಲಿದೆ. 2ರಂದು ಬೆಳಗ್ಗೆ ನಾಗತೀರ್ಥ ನದಿಯ ಮೂಲಸ್ಥಾನವಾದ ಬಂಟಮಲೆಯಿಂದ ಶ್ರೀ ದೇವಳಕ್ಕೆ ತೀರ್ಥ ತರುವುದು, ಮಹಾಪೂಜೆ, 3ರಂದು ಸೋಮವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಹಸಿರು ಕಾಣಿಕೆ ಸಂಗ್ರಹಣೆಗೆ ಹೊರಡುವುದು, ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಸಂಜೆ ಸೀಮೆಯ ವಿವಿಧ ಕಡೆಗಳಲ್ಲಿ ಸಂಗ್ರಹಗೊಂಡ ಹಸಿರು ಕಾಣಿಕೆಯನ್ನು ಪಂಜದ ಪುತ್ಯದ ಸತ್ಯಕಟ್ಟೆಯಿಂದ ಆಕರ್ಷಕ ಮೆರವಣಿಗೆಯೊಂದಿಗೆ ತಂದು ದೇವಳಕ್ಕೆ ಸಮರ್ಪಣೆ, ಉಗ್ರಾಣ ತುಂಬಿಸುವುದು, ಮಹಾಪೂಜೆ, ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು ನಡೆಯಲಿದೆ. 4 ಮಂಗಳವಾರ ಹಗಲು ದೇವರ ಉತ್ಸವ, ಮಹಾಪೂಜೆ, ನಿತ್ಯ ಬಲಿ, ರಾತ್ರಿ ಮಹಾಪೂಜೆ, ಬಲಿ ಉತ್ಸವ ನೆರವೇರಲಿದೆ.

6ರಂದು ಬ್ರಹ್ಮ ರಥೋತ್ಸವ

5ರಂದು ಹಗಲು ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ರಾತ್ರಿ ದೀಪೋತ್ಸವ, ದೇವರ ಬಲಿ ಹೊರಟು ಉತ್ಸವ, ಬೀದಿ ಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ದೇವರ ಬಲಿ ಉತ್ಸವ, ಮಹಾಪೂಜೆ, ಶ್ರೀಭೂತ ಬಲಿ, ಶಯನೋತ್ಸವ, ಕವಾಟ ಬಂಧನ, ಫೆ.6ರಂದು ಹಗಲು ಬಲಿ ಹೊರಟು ಉತ್ಸವ, ರಾತ್ರಿ ಬ್ರಹ್ಮರಥೋತ್ಸವ, ಕಾಚು ಕುಜುಂಬ ದೈವದ ನರ್ತನ ಸೇವೆ ಜರುಗಲಿದೆ. 7ಶುಕ್ರವಾರ ಹಗಲು ಕವಾಟೋದ್ಘಾಟನೆ, ಅಭಿಷೇಕ, ರಾತ್ರಿ ಕಾಚುಕುಜುಂಬ ದೈವದ ನರ್ತನ ಸೇವೆಯ ನಂತರ ನಾಗತೀರ್ಥ ನದಿಯ ಜಳಕದ ಹೊಳೆಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ ನಂತರ ಕಾಚುಕುಜುಂಬ ದೈವದ ನೇಮೋತ್ಸವ ನಡೆಯಲಿದೆ. 8ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ರಾತ್ರಿ ಶಿರಾಡಿ ದೈವದ ಭಂಡಾರ ಬರುವುದು. 9ರಂದು ಅಮ್ಮನವರ ಪೂಜೆ ಮತ್ತು ಶಿರಾಡಿ ದೈವದ ನೇಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net