ಕೋಲಾರದಲ್ಲಿ ಶೀಘ್ರ ರಿಂಗ್​ ರೋಡ್​

ವರ್ತುಲ ರಸ್ತೆ ನಿರ್ಮಾಣ ಕುರಿತು ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂ.ಎಲ್​.ಅನಿಲ್​ ಕುಮಾರ್​ ಅವರು ಬೆಂಗಳೂರಿನಲ್ಲಿ ಶನಿವಾರ ತಜ್ಞರೊಂದಿಗೆ ಚರ್ಚೆ ನಡೆಸಿದರು.
31klr5- ring road story
ವರ್ತುಲ ರಸ್ತೆ ನಿರ್ಮಾಣ ಕುರಿತು ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂ.ಎಲ್​.ಅನಿಲ್​ ಕುಮಾರ್​ ಅವರು ಬೆಂಗಳೂರಿನಲ್ಲಿ ಶನಿವಾರ ತಜ್ಞರೊಂದಿಗೆ ಚರ್ಚೆ ನಡೆಸಿದರು.
Published on

ಡಿಪಿಆರ್​ ತಯಾರಿಗೆ ತಜ್ಞರೊಂದಿಗೆ ಜನಪ್ರತಿನಿಧಿಗಳ ಚರ್ಚೆ - ಸರ್ಕಾರದಿಂದ ಅನುದಾನ ಮೀಸಲು



ಕೋಲಾರ: ನಗರ ಹೊರವಲಯದಲ್ಲಿ ವರ್ತುಲ ರಸ್ತೆ (ರಿಂಗ್​ ರೋಡ್​) ನಿರ್ಮಾಣ ಕುರಿತು ಸಿದ್ಧತೆಗಳು ಬರದಿಂದ ಸಾಗಿದ್ದು, ಡಿಪಿಆರ್​ ತಯಾರಿ ಕುರಿತು ತಜ್ಞರೊಂದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಾಧಕ-ಬಾಧಕಗಳ
ಬಗ್ಗೆ ಶನಿವಾರ ಚರ್ಚೆ ನಡೆಸಿದರು.
ನಗರ ಸೇರಿ ಜಿಲ್ಲಾದ್ಯಂತ ವಾಹನಗಳ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ದಟ್ಟಣೆ ಕಡಿಮೆ ಮಾಡಲು ಸೂಕ್ತ ರಸ್ತೆ ಮಾರ್ಗ ಇಲ್ಲದೆ ಇರುವುದರಿಂದ ವರ್ತುಲ ರಸ್ತೆಗೆ 2004ರಲ್ಲೇ ಅಸ್ತು ಎಂದಿತ್ತು. 2018ರಲ್ಲಿ ಮರುಜೀವ ನೀಡಿದ ಕೆಯುಡಿ ಅಗತ್ಯವಿರುವ ಭೂಮಿ ಸ್ವಾಧಿನಕ್ಕೆ ತಯಾರಿಸಿ ನಡೆಸಿತು.
ಈಗ ನಗರಾಭಿವೃದ್ಧಿ ಇಲಾಖೆ ಸಚಿವರಾಗಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಬೈರತಿ ಸುರೇಶ್​ ಕೋಲಾರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಆಸಕ್ತಿ ತೋರಿದ್ದಾರೆ.
ತಾಲೂಕಿನ ನರಸಾಪುರ, ವೇಮಗಲ್​ಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇಲ್ಲಿಗೆ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಬೆಂಗಳೂರು, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಕೋಲಾರಕ್ಕೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ದಟ್ಟಣೆ ನಿಯಂತ್ರಿಸಲು ರಸ್ತೆಗಳು ಅಭಿವೃದ್ಧಿ ಹೊಂದಿಲ್ಲ. ಇದರಿಂದಾಗಿ ವರ್ತುಲ ರಸ್ತೆಯು ಅಗತ್ಯವಿದೆ.
ವರ್ತುಲ ರಸ್ತೆ ನಿರ್ಮಾಣದ ಸಲುವಾಗಿ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ನೀಲಿನೆ ತಯಾರಿಸಲಾಗಿದ್ದು, ಅಧಿಕಾರಿಗಳು ಸಹ ಹಲವು ಬಾರಿ ಸ್ಥಳ ಪರಿಶೀಲಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಿಗೂ ವರದಿ ನೀಡಿದ್ದಾರೆ. ಕೋಲಾರ ತಾಲೂಕಿನ ನಾಗಲಪುರ, ಸೂಲೂರು, ವೇಮಗಲ್​, ಉಪ್ಪಕುಂಟೆ, ಮಣಿಟ್ಟ, ಕೋಗಿಲಹಳ್ಳಿ, ಸಂಗೋಡಹಳ್ಳಿ, ಕೋಡರಾನಹಳ್ಳಿ, ಕೋರಗಂಡಹಳ್ಳಿ ಸೇರಿ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ವರ್ತುಲ ರಸ್ತೆ ಏಕೆ ಬೇಕು?
ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ವಾಹನ ಸಂಚಾರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಜಿಲ್ಲಾ ಕೇಂದ್ರದಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಎಪಿಎಂಸಿಗಳಿಂದ ಬೆಂಗಳೂರು ಸೇರಿ ಹೊರ ರಾಜ್ಯಗಳಿಗೆ ಟೊಮ್ಯಾಟೊ, ತರಕಾರಿ ಸಾಗಣೆಯಾಗುತ್ತದೆ. ರಸ್ತೆಗಳು ಕಿರಿದಾಗಿರುವುದರಿಂದ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿದೆ. ವರ್ತುಲ ರಸ್ತೆ ನಿರ್ಮಾಣವಾದರೆ ಹೆಚ್ಚು ಅನುಕೂಲವಾಗಲಿದೆ.

350 ಕೋಟಿ ಮೀಸಲು

ಕೇಂದ್ರ ಸರ್ಕಾರದಿಂದ ನಗರಾಭಿವೃದ್ಧಿ ಇಲಾಖೆಗೆ 350 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 150 ಕೋಟಿ ರೂ.ಗಳನ್ನು ಕೋಲಾರ ಜಿಲ್ಲೆಗೆ ಮೀಸಲಿರಿಸಲಾಗಿದೆ. ಅದರಲ್ಲಿ 100 ಕೋಟಿ ರೂ.ಗಳನ್ನು ರಿಂಗ್​ರಸ್ತೆ ನಿಮಾರ್ಣಕ್ಕೆ ಇಡಲಾಗಿದ್ದು, ಕ್ರಿಯಾ ಯೋಜನೆ (ಡಿಪಿಆರ್​) ಸಿದ್ಧಪಡಿಸಲು ಶಾಸಕ, ಎಂಎಲ್ಸಿಗೆ ಅವರಿಗೆ ಸಲಹೆ ನೀಡಿದ್ದರು. ಅದರಂತೆ ಶಾಸಕ ಕೊತ್ತೂರು ಜಿ.ಮಂಜುನಾಥ್​, ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​, ಕೆಯುಡಿಎ ಅಧ್ಯಕ್ಷ ಮಹಮದ್​ ಹನ್​ೀ, ಆಯುಕ್ತ ಶ್ರೀನಾಥ್​, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ರಾಮಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್​, ಕೆಪಿಸಿಸಿ ಸದಸ್ಯ ನಂದಿನಿ ಪ್ರವಿಣ್​ ಗೌಡ ಅವರು ಬೆಂಗಳೂರಿನ ರಸ್ತೆ ನಿರ್ಮಾಣ ಸಂಬಂಧಿಸಿದಂತೆ ನುರಿತ ತಜ್ಞರನ್ನು ಭೇಟಿ ಮಾಡಿ ಡಿಪಿಆರ್​ ತಯಾರಿ ಕುರಿತು ಶನಿವಾರ ಸುದೀರ್ ಚರ್ಚೆ ನಡೆಸಿದ್ದಾರೆ.

ಮುಂದಿನ ವಾರ ಸಚಿವರ ನೇತೃತ್ವದಲ್ಲಿ ಸಭೆ
ವರ್ತುಲ ರಸ್ತೆ ನಿರ್ಮಾಣಕ್ಕೆ ಬಹಳ ಅಸಕ್ತಿ ತೋರಿರುವ ಜಿಲ್ಲೆಯ ಜನಪ್ರತಿನಿಧಿಗಳು ಮುಂದಿನ ವಾರ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ಸೇರಿ, ತಜ್ಞರ ಸಮ್ಮುಖದಲ್ಲಿ ಡಿಪಿಆರ್​ ತಯಾರಿ ಕುರಿತು ಚರ್ಚಿಸಲಿದ್ದಾರೆ.

ಕೋಲಾರದಲ್ಲಿ ರಿಂಗ್​ರೋಡ್​ ನಿರ್ಮಾಣ ಆಗಬೇಕು ಎಂಬುದು ಬಹುವರ್ಷಗಳ ಕನಸು. ಇದಕ್ಕಾಗಿ ಯೋಜನೆ ಕೈಗೆತ್ತಿಕೊಂಡಿದ್ದು, ಡಿಪಿಆರ್​ ತಯಾರಿ ಕುರಿತು ಚರ್ಚಿಸಲಾಗಿದೆ. ರಿಂಗ್​ರೋಡ್​ ನಿರ್ಮಾಣದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಎಂ.ಎಲ್​.ಅನಿಲ್​ ಕುಮಾರ್​ ವಿಧಾನ ಪರಿಷತ್​ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net