

ಸಿಂಧನೂರು: ನಗರದ ಕೋಟೆಯ ಬಸವಮಂಗಲ ಭವನದಲ್ಲಿ ಮಾ.24 ರಂದು ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ವೀರಶೈವ ಧರ್ಮ ಸಂಸ್ಥಾಪಕ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು ಹೇಳಿದರು.
ಇದನ್ನೂ ಓದಿ:ರೇಣುಕಾಚಾರ್ಯರ ಕೊಡುಗೆ ಅಪಾರ
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶಕ್ಕೆ ಜಾತ್ಯತೀತ ಹಾಗೂ ಶಿಕ್ಷಣದ ಮಹತ್ವ ತಿಳಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಬೆಳಗ್ಗೆ 7ಕ್ಕೆ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಶ್ರೀ ಸಂಗಮೇಶ್ವರ ದೇವಸ್ಥಾನ ಪಟೇಲವಾಡಿಯಿಂದ ಕುಂಭ, ಕಳಸದೊಂದಿಗೆ ಮೆರವಣಿಗೆ ಮಾಡಲಾಗುವುದು. ನಂತರ ಕೋಟೆ ಬಸವಮಂಗಲ ಭವನದಲ್ಲಿ ಧರ್ಮಸಭೆ ನಡೆಯಲಿದೆ. ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ವೆಂಕಟಗಿರಿಕ್ಯಾಂಪ್ ಸಿದ್ಧಾಶ್ರಮದ ಡಾ.ಸಿದ್ಧರಾಮ ಶರಣರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಂಪನಗೌಡ ತಾವರಗೇರಾ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಪ್ರಮುಖರಾದ ಪಂಪನಗೌಡ ಬಾದರ್ಲಿ, ರಾಜೇಶ ಹಿರೇಮಠ, ಸೋಮನಗೌಡ ಬಾದರ್ಲಿ, ಹಂಪಯ್ಯಸ್ವಾಮಿ ರ‌್ಯಾವಿಹಾಳ, ಪ್ರಭುರಾಜ ಕರ್ಪೂರಮಠ, ಆದಿಬಸವ, ವೀರೇಶ ಕೋಟೆ ಇತರರಿದ್ದರು.