ಸರ್ವ ಧರ್ಮಗಳನ್ನು ಸಮಾನವಾಗಿಕಂಡ ರೇಣುಕಾಚಾರ್ಯ ಶ್ರೀಗಳು

15KDR1
Published on

ಕಡೂರು: ಆದಿ ರೇಣುಕಾಚಾರ್ಯ ಮಹೋತ್ಸವವನ್ನು ಯುಗ ಯುಗಗಳಿಂದ ಆಚರಿಸುತ್ತಿದ್ದು, ಅದುವೇ ವೀರಶೈವ ಪರಂಪರೆಯಾಗಿ ಪರಿವರ್ತನೆಗೊಂಡಿದೆ ಎಂದು ಬೀರೂರು ರಂಭಾಪುರಿ ಶಾಖಾಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಡೂರು ತಾಪಂ ಸಭಾಂಗಣದಲ್ಲಿ ನಡೆದ ಶ್ರೀರೇಣುಕಾಚಾರ್ಯ ಜಯಂತಿ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಆದಿ ಜಗದ್ಗುರು ರೇಣುಕಾಚಾರ್ಯರು ಪಂಚತತ್ವಗಳ ಅಧಿಪತಿಯಾಗಿ ಪಂಚಾಚಾರ್ಯರಾಗಿ ಸರ್ವ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ ಧರ್ಮೋಪದೇಶವನ್ನು ಅಂದಿನಿಂದಲೂ ನೀಡುತ್ತಾ ಬಂದಿದ್ದಾರೆ. ಯುಗ ಯುಗಗಳಿಂದಲೂ ರೇಣುಕಾಚಾರ್ಯರು ಇದ್ದಾರೆ ಮುಂದೆಯೂ ಇರುತ್ತಾರೆ ಎಂದರು.

ಕಡೂರಿನ ಭಕ್ತರು ಶ್ರೀ ರೇಣುಕಾಚಾರ್ಯರ ಭಕ್ತರಾಗಿದ್ದು, ಮಾಜಿ ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರು ಪಂಚಪೀಠಗಳ ಐದು ಗುರುಗಳನ್ನು ಕರೆಯಿಸಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿ ದಾಖಲೆ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅದೇ ಭಕ್ತಿ, ಪ್ರೀತಿಯನ್ನು ಜನತೆ ಇಟ್ಟುಕೊಂಡಿದ್ದಾರೆ. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರು ಶ್ರೀರೇಣುಕಾ ಪ್ರತಿಮೆ ಪ್ರತಿಷ್ಟಾಪನೆಗೆ ಒಂದು ವೃತ್ತ ಗುರುತಿಸಿದರೆ ಅವರಿಗೆ ಸಮಾಜ ಧನ್ಯವಾಗುತ್ತದೆ ಎಂದರು.

ಯಳನಾಡು ಮಠದ ಶ್ರೀಸಿದ್ದರಾಮದೇಶೀಕೆಂದ್ರ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭು ಕುಮಾರ ಸ್ವಾಮೀಜಿ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಲೋಕೇಶ್, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ, ತುರುವನಹಳ್ಳಿ ರೇಣುಕಪ್ಪ, ರಾಜಣ್ಣ, ಸಿದ್ದಪ್ಪ ಆಸಂದಿ ಕಲ್ಲೇಶ್, ಎಂ.ಹೆಚ್.ಪ್ರಕಾಶಮೂರ್ತಿ, ರಾಜಶೇಖರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net