

ಗುತ್ತಲ: ಶಿವನ ಸದ್ಯೋಜಾತ ಮುಖದಿಂದ ಆಂಧ್ರಪ್ರದೇಶದ ಕೊಲ್ಲಿಪಾಕನಲ್ಲಿ ಲಿಂಗದಿಂದ ಉದ್ಭವಿಸಿದ ಜಗದ್ಗುರು ಶ್ರೀ ರೇಣುಕ ಭಗತ್ಪಾದರು ವೀರಶೈವ ಧರ್ಮ ಸ್ಥಾಪಿಸಿ ಮನುಕುಲ ಉದ್ಧರಿಸಿದರು ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹೇಮಗಿರಿಮಠದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ಶ್ರೀ ಹೇಮಗಿರಿಮಠದ ಕಳಸಾರೋಹಣ-ನೂತನ ಶಿಲಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದ ಪ್ರಥಮ ಪ್ರಕಟಣೆ ಹಾಗೂ ಭಿತ್ತಿ ಪತ್ರಗಳ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಏ. 14ರಿಂದ 16ರವರೆಗೆ ಹೇಮಗಿರಿಮಠದ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಕಳಸಾರೋಹಣ ಮತ್ತು ನೂತನ ಶಿಲಾಮಂದಿರ ಲೋಕಾರ್ಪಣೆ ಮಾಡುವರು ಎಂದರು.
ಗುತ್ತಲ ಸೇರಿ ಸುತ್ತಲಿನ ಸಾವಿರಾರು ಭಕ್ತರು 4 ವರ್ಷಗಳ ಕಾಲ ಶ್ರಮವಹಿಸಿ ಭವ್ಯವಾದ ಶಿಲಾ ಮಠ ನಿರ್ವಿುಸಿದ್ದೀರಿ. ಶ್ರೀ ಹೇಮಗಿರಿ ಚನ್ನಬಸವೇಶ್ವರರ ಸೇವೆಯನ್ನು ಭಕ್ತಿಯಿಂದ ಮಾಡಿದ್ದೀರಿ. ಎಲ್ಲ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕು ಎಂದರು.