

ಅರಕಲಗೂಡು: ತಾಲೂಕಿನ ಹರದೂರುಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ಬೆಳಗ್ಗೆ ಮೂಲ ದೇವರಿಗೆ ಅಭಿಷೇಕ, ವಿಶೇಷ ಪೂಜಾ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಐತಿಹಾಸಿಕ ಬೆಟ್ಟದ ಮೇಲಿಂದ ದೇವರ ಉತ್ಸವ ಮೂರ್ತಿಯನ್ನು ಕೆಳಗೆ ತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜಾ ಪುನಸ್ಕಾರಗಳನ್ನು ಪೂರೈಸಲಾಯಿತು. ಬಳಿಕ ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ತೇರು ಎಳೆಯಲು ಆರಂಭಿಸಿದರು. ತೇರಿನತ್ತ ಹಣ್ಣು- ದವನ ಎಸೆದು ಭಕ್ತಿಭಾವ ಅರ್ಪಿಸಿದರು. ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಶಾಸಕ ಎಚ್.ಡಿ.ರೇವಣ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಸೇರಿದಂತೆ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿದ್ದರು.