

ಕುಶಾಲನಗರ:
ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರೀ ರಾಮನ ಭಕ್ತರು ಬೆಳಗ್ಗೆಯಿಂದಲೇ ರಾಮನ ಧ್ಯಾನದ ಜತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕಾವೇರಿ ನದಿಗೆ ವಿಶೇಷ ಮಹಾ ಆರತಿ, ಸೇವಕರಿಗೆ ಸನ್ಮಾನ, ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ, ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಹೋಮ-ಹವನ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು.
ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಶ್ರೀ ಕಾವೇರಿ ಆರತಿ ಕ್ಷೇತ್ರದಲ್ಲಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಪಟ್ಟಣದ ದೇವಾಲಯಗಳ ಸಮಿತಿ ಅಧ್ಯಕ್ಷರುಗಳಿಗೆ ಗೌರವ ಸಲ್ಲಿಕೆ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.
ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ವಹಿಸಿದ್ದರು. ಕೊಪ್ಪ ಭಾರತ ಮಾತಾ ಪದವಿ ಕಾಲೇಜು ಪ್ರಾಂಶುಪಾಲ ಫಾ. ಅಭಿನ್ ಮತ್ತು ಪಕ್ಕದ ಬೈಲಕುಪ್ಪೆ ಕರ್ಮಫ ಟಿಬೇಟಿಯನ್ ದೇವಾಲಯದ ಗುರುಗಳು ಪಾಲ್ಗೊಂಡು ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕಾವೇರಿ ಆರತಿ ಬಳಗದ ಪದಾಧಿಕಾರಿಗಳು, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ವಿವಿಧ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು, ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ರಾಮ ತಾರಕ ಹೋಮ ನಡೆಯಿತು. ಹೋಮದ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ ತನಕ ಪಾಂಚಜನ್ಯ ಭಜನಾ ಮಂಡಳಿಯಿAದ ರಾಮ್ ಧ್ಯಾನ್ ಮತ್ತು ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವದೇಶೀಕೇಂದ್ರ ಸ್ವಾಮೀಜಿ ಪೂಜೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಶ್ರೀ ರಾಮಸೇವಾ ಸಮಿತಿ ಹಾಗೂ ದೇವಾಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಇರುವ 10 ಕ್ಕೂ ಅಧಿಕ ಮಂದಿ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೃಹತ್ ಎಲ್.ಇ.ಡಿ.ಪರದೆ ಮೂಲಕ ಅಯೋಧ್ಯೆ ರಾಮಲಾಲ್ಲ ಪ್ರತಿಷ್ಠಾಪನೋತ್ಸವ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ, ಆಂಜನೇಯ ದೇವಾಲಯ ಸಮಿತಿಯಿಂದ ಗಾಯತ್ರಿ ಸಭಾಂಗಣದಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಪ್ರಮುಖರಾದ ಎಂ.ಕೆ.ದಿನೇಶ್, ಪುಂಡರೀಕಾಕ್ಷ, ಜನಾರ್ದನ್, ಬಿ.ಅಮೃತ್ ರಾಜ್, ವೈಶಾಖ್, ಪ್ರವೀಣ್, ಚಂದ್ರು ಹಾಗೂ ಪದಾಧಿಕಾರಿಗಳು, ಸದಸ್ಯರು ಇದ್ದರು.