

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯ
ಆಲೂರು: ಪ್ರಯತ್ನಶೀಲ ಮನುಷ್ಯನಿಗೆ ಜಯ ನಿಶ್ಚಿತ. ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಹಣೆಬರಹದಲ್ಲಿ ಭವಿಷ್ಯವಿಲ್ಲ. ಹಣೆಯ ಬೆವರಿನಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಪಾಳ್ಯ ಹೋಬಳಿಯ ಕಾರ್ಜುವಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ 46ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ 4ನೇ ವಾರ್ಷಿಕೋತ್ಸವ-ವಧರ್ಂತಿ ಮಹೋತ್ಸವದ ಅಂಗವಾಗಿ ಐದನೇ ದಿನ ಆಯೋಜಿಸಿದ್ದ ಧರ್ಮ ಸಂವರ್ಧನಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಿಜವಾದ ಸಂಬಂಧಗಳು ಸಮಯ ಮತ್ತು ಗೌರವ ಹೊರತುಪಡಿಸಿ ಬೇರೇನನ್ನೂ ಬಯಸುವುದಿಲ್ಲ. ಎಷ್ಟೇ ಸಮಸ್ಯೆಗಳು ಬಂದರೂ ಆತ್ಮ ವಿಶ್ವಾಸದಿಂದ ಬಾಳಿದರೆ ಜಯ ನಿಶ್ಚಿತ. ಬದುಕು ಹೇಗೆ ಸಾಗಿಸುವುದೆಂದು ಭಯಪಡಬಾರದು ಮನುಷ್ಯ ಸಹ ಕ್ರಿಯಾಶೀಲನಾಗಿ ಶ್ರಮದಿಂದ ದುಡಿದರೆ ಜೀವನ ಸಮೃದ್ಧಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಕಾರ್ಜುವಳ್ಳಿ ಶ್ರೀ ಅಧ್ಯಾತ್ಮ ಜೀವಿ: ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಅದೇ ದಾರಿಯಲ್ಲಿ ಶರಣರು ಶ್ರಮಿಸಿ ದುಡಿಮೆಯ ಮಹತ್ವವನ್ನು ಸಾರಿದ್ದಾರೆ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಅಧ್ಯಾತ್ಮ ಜೀವಿಗಳಾಗಿದ್ದು ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಸಂತೋಷವನ್ನು ಉಂಟು ಮಾಡಿದೆ. ಗುರು ಪರಂಪರೆಯ ಆದರ್ಶ ವಿಚಾರ ಧಾರೆಗಳನ್ನು ಜನಮನಕ್ಕೆ ಮುಟ್ಟಿಸಿದ ಶ್ರೇಯಸ್ಸು ಅವರದಾಗಿದೆ ಎಂದು ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಸಂತಸ ವ್ಯಕ್ತ ಪಡಿಸಿದರು.
ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಮಹತ್ವ : ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿನ ವಿಕಾಸಕ್ಕೆ ಅಧ್ಯಾತ್ಮದ ಅರಿವು ಮತ್ತು ಗುರು ಮಾರ್ಗದರ್ಶನ ಅವಶ್ಯಕ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಮಹತ್ವವನ್ನು ಕೊಟ್ಟಿದ್ದಾರೆ. ಪಟ್ಟಾಧಿಕಾರದ 4ನೇ ವರ್ಷದ ವರ್ಧಂತಿ ಜನ್ಮ ದಿನೋತ್ಸವ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ನಮ್ಮ ಸೌಭಾಗ್ಯ ಎಂದರು.
ಸಂಸ್ಕೃತಿ ಬಿತ್ತುವ ಕೆಲಸವಾಗಲಿ: ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಮಂದಿರಗಳು ಹೆಚ್ಚಾಗುತ್ತಿದ್ದು, ಭಕ್ತಿಯ ಸಂಕೇತವಿದು. ಕೇವಲ ಮಂದಿರಗಳನ್ನು ಕಟ್ಟಿ ಬಿಡದೆ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ: ಶ್ರೀಮಠದ ಆವರಣದಲ್ಲಿ ದುರ್ಗಾ ಮೂಲಮಂತ್ರ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಈಶಾವಾಸೋಪನಿಷತ್ ಪಾರಾಯಣ ಪೂರ್ವಕ ಸುವರ್ಣಾಭಿಷೇಕ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಮೇಧಾಸೂಕ್ತ ಪಾರಾಯಣ ಪೂರ್ವಕ ಇಕ್ಷುರಸಾಭಿಷೇಕ, ತುಳಸಿಪತ್ರಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ತರಕಾರಿ ಅಲಂಕಾರ ಶಮಿಪತ್ರಾರ್ಚನೆ, ಮಹಾ ಮಂಗಳಾರತಿ, ಶ್ರೀ ಇಷ್ಟನಾಗ, ಸಿದ್ದಿನಾಗ, ಮುಕ್ತಿನಾಗ ಸನ್ನಿಧಿಯಲ್ಲಿ ವಿಷ್ಣುಸೂಕ್ತ ಪಾರಾಯಣ ಪೂರ್ವಕ ನಾನಾಫಲ-ಶರ್ಕರಾಭಿಷೇಕ, ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಜರುಗಿತು.ಮೈತ್ರಿ ಎಸ್. ಮಾದಗುಂಡಿ ಅವರಿಂದ ಭರತನಾಟ್ಯ ಜರುಗಿತು.
ವಕೀಲ ಆಲೂರಿನ ಎಂ. ಎಸ್ ಮಹೇಶ್‌ಗೆ ಶ್ರೀಮಠದಿಂದ ಧರ್ಮ ಹಿತಚಿಂತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಗೌರವ ಗುರು ರಕ್ಷ-ಬೆಂಗಳೂರಿನ ನವೀನ್ ಕುಮಾರ್, ಆಲೂರು ಕಾಫಿ ಪಾಯಿಂಟ್ ಮಾಲೀಕ ಎ.ಎನ್.ರೇಣುಕ ಪ್ರಸಾದ್, ಅನಿಲ್, ಚನ್ನಬಸಪ್ಪ (ಬಸವಣ್ಣ) ಹೆದ್ದುರ್ಗ, ವಿನಯ್ ಶೈವ ಮಲ್ನಾಡ್, ವೈ.ಡಿ.ಸಮರ್ಥ, ಭೂಮಿಕಾ, ಶೀಲಾ ಬಸಂತ್ , ಸುಜಾತಾ ಕುಮಾರ್, ಶಾಂತಾ ಆನಂದ್, ದೇವಿಕಾ ಕುಮಾರ್ ಅವರಿಗೆ ನೀಡಲಾಯಿತು.
ಕಡೆನಂದಿಹಳ್ಳಿ ತಪೋಕ್ಷೇತ್ರ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶ್ರೀ ರಾಮಲಿಂಗೇಶ್ವರಮಠ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳು, ನಾಗವಂದ ಹೊರಗಿನಮಠ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕೆಸವತ್ತೂರು ಮಠದ ಶ್ರೀ ಬಸವರಾಜ ಸ್ವಾಮಿಗಳು, ಅರಕಲಗೂಡು ಮಲ್ಲೇಶ್ ಸ್ಟೋನ್ ಕ್ರಷರ್ ಮಾಲೀಕ ಸುರೇಶ್, ಹಾಸನ ಶಿವಗಂಗಾ ಗ್ರಾನೈಟ್ಸ್ ಮಾಲೀಕ ಎಸ್. ಎಚ್. ರಾಜಶೇಖರ್, ಬಾಳುಪೇಟೆ ಕಾಫಿ ಬೆಳೆಗಾರ ಬಿ. ಎಸ್. ಮಲ್ಲಿಕಾರ್ಜುನ್, ಶ್ರೀ ಹಿರೇಮಠದ ಆಡಳಿತಾಧಿಕಾರಿ ಎಸ್. ಎಸ್. ಶಿವಮೂರ್ತಿ ಸಿದ್ದಾಪುರ, ಸಲಹೆಗಾರ ಡಾ. ಎಂ. ಈ.ಜಯರಾಜು, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್ ಇದ್ದರು.