

ಬಾಳೆಹೊನ್ನೂರು : ತೀವ್ರ ವಿರೋಧಕ್ಕೆ ಕಾರಣವಾಗಿದ್ದ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ 10 ವರ್ಷಗಳ ಹಿಂದೆ ನಡೆಸಲಾಗಿದ್ದ ಜಾತಿ ಜನಗಣತಿಯನ್ನು ಕೈಬಿಟ್ಟು ಹೊಸ ಜಾತಿಗಣತಿಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸ್ವಾಗತಿಸಿದ್ದಾರೆ.
ರಾಜ್ಯದಲ್ಲಿ ಜಾತಿ ಜನಗಣತಿಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ಧುರೀಣರು ಹೇಳಿದ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದು ಅಸಮಾಧಾನಗೊಂಡಿರುವ ಸಮುದಾಯಗಳ ವಾಸ್ತವ ಅಂಕಿಅಂಶ ಹೊರಬರುವ ವಿಶ್ವಾಸ ಮೂಡಿಸಿದೆ. ಹೊಸದಾಗಿ ಸರ್ಕಾರ ನಡೆಸಲಿರುವ ಜಾತಿ ಜನಗಣತಿ ಸಂದರ್ಭದಲ್ಲಿ ಸಮಾಜ ಬಾಂಧವರು ತಮ್ಮ ಯಾವುದೇ ಒಳಪಂಗಡವಿದ್ದರೂ ವೀರಶೈವ-ಲಿಂಗಾಯತ ಎಂದೇ ಬರೆಯಿಸಬೇಕು. ಆ ಮೂಲಕ ಸಮಾಜದ ಒಗ್ಗಟ್ಟು ಮತ್ತು ನೈಜ ಚಿತ್ರಣವನ್ನು ದಾಖಲಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದ್ದಾರೆ.
ಪೌರ್ಣಿಮೆ ಪ್ರಯುಕ್ತ ಶ್ರೀರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ನೆರವೇರಿಸಿದ ಜಗದ್ಗುರುಗಳು ಶ್ರೀಪೀಠಕ್ಕೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲರನ್ನು ಆಶೀರ್ವದಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಶುಮಂತ್ ಸೇರಿ ಸ್ಥಳೀಯ ಮುಖಂಡರು,ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.