

ಮಂಡ್ಯ: ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸುವ ಪ್ರತಿ ಭಕ್ತರಿಗೂ ಸಂಸ್ಕಾರ, ನೆಮ್ಮದಿ ಪ್ರಾಪ್ತಿಯಾಗಲಿದೆ. ಸನಾತನ ಧರ್ಮವನ್ನು ಪ್ರೀತಿಸುವ ಗೌರವಿಸುವ ಪ್ರತಿಯೊಬ್ಬರು ಶ್ರೀರಾಮಚಂದ್ರನ ಜನ್ಮದಿನದ ಆಚರಣೆಗೆ ಮುಂದಾಗುತ್ತಾರೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ಇಲ್ಲಿನ ನೆಹರುನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಜನಾ ಸಭಾದಿಂದ ಆಯೋಜಿಸಿದ್ದ 42ನೇ ವರ್ಷದ ಶ್ರೀರಾಮನವಮಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಕ್ತಿ ಹಾಗೂ ಶ್ರದ್ಧೆಯಿಂದ ದೇವಾಲಯ ಪ್ರವೇಶಿಸಿದರೆ ಮನಸ್ಸಿನಲ್ಲಿರುವ ಕಳವಳ ನಾಶವಾಗಿ ಸಕಾರಾತ್ಮಕ ಅಂಶಗಳು ಪ್ರಾಪ್ತಿಯಾಗುತ್ತವೆ. ಅದನ್ನು ಬಿಟ್ಟು ಭಯದಿಂದ ದೇವಾಲಯ ಪ್ರವೇಶಿಸಿದರೆ ಯಾವುದೇ ಗಳಿಕೆ ಸಾಧ್ಯವಿಲ್ಲವೆಂದರು.
ನಮ್ಮ ಸಂಸ್ಕೃತಿಯ ಸತ್ಸಂಪ್ರದಾಯಗಳನ್ನು ಪಾಲಿಸುವ ಮತ್ತು ಪೋಷಿಸುವ ಹೊಣೆಗಾರಿಕೆ ಹಿರಿಯರಿಗೆ ಮಾತ್ರ ಸೀಮಿತ ಎಂಬರ್ಥದಲ್ಲಿ ಕಿರಿಯರು ದೇವಾಲಯ, ಜಾತ್ರೆ, ಉತ್ಸವ ಮುಂತಾದ ಧಾರ್ಮಿಕ ಕಾರ್ಯಗಳೆಡೆಗೆ ಬೆನ್ನು ತೋರಿರುವುದು ಸರಿಯಲ್ಲ. ಅನ್ಯ ಧರ್ಮಿಯರ ಒಗ್ಗಟ್ಟು, ಕಾಯಕ ಮತ್ತು ಭಕ್ತಿ ನಮ್ಮ ಯುವಕರಿಗೆ ಅನುಕರಣಿಯವಾಗಬೇಕು. ಆ ಮೂಲಕ ಭಕ್ತಿಯ ಸ್ಮರಣೆಗೆ ಎಲ್ಲರೂ ಒಳಗಾಗಬೇಕೆಂದು ಕಿವಿಮಾತು ಕೇಳಿದರು.
ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮಚಂದ್ರನ ನವಮಿಯನ್ನು ದೇಶಾದ್ಯಂತ ಆಚರಿಸಲುವ ಮೂಲಕ ಭಗವಂತನಿಗೆ ಪೂಜಿಸಿದರೆ ಅದೇ ರೀತಿ ಭಕ್ತನಾದ ಹನುಮಂತನಿಗೂ ಪೂಜಿಸುವ ಪ್ರಕ್ರಿಯೆ ಸನಾತನ ಧರ್ಮವಾದ ಹಿಂದು ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯವಾಗಿದೆ. ನಮ್ಮ ಹಿರಿಯರು ಸಾಧಿಸಿದ ಹಿರಿಮೆ-ಗರಿಮೆಗಳನ್ನು ಇಂದಿನ ತಲೆಮಾರು ಸಾಧಿಸಲಾಗದಿರುವುದು ವಿಷಾಧದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ದೇವಾಲಯಗಳ ನಿರ್ಮಾಣದ ಜತೆಗೆ ಕೆರೆ-ಕಟ್ಟೆಗಳನ್ನು ಕಟ್ಟುವುದು ಪುಣ್ಯದ ಕೆಲಸವಾಗಿದ್ದು, ಪೂಜೆ ಪುನಸ್ಕಾರ, ಹಬ್ಬ, ಉತ್ಸವಗಳು ನಡೆಯದಿದ್ದರೆ ಮನುಷ್ಯ ವಿಕಾರ ಹಾಗೂ ವ್ಯಾಕುಲಕ್ಕೆ ಒಳಗಾಗಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಯಾಂತ್ರಿಕತೆಗಿಂತ ಮಾಂತ್ರಿಕತೆಗೆ ಮೌಲ್ಯವಿದ್ದು ಭಕ್ತಿಯ ತನ್ಮಯತೆಗೆ ಪರಮಾತ್ಮನ ದಿವ್ಯಶಕ್ತಿ ಪ್ರಾಪ್ತಿಯಾಗುತ್ತದೆ. ರಾಮಕೃಷ್ಣ ಪರಮಹಂಸರು ಭಕ್ತಿಗೆ ತುಂಬು ಆದ್ಯತೆ ನೀಡಿದ್ದರು. ಕಾಳಿ ಮಾತೆಯ ಪೂಜೆಯನ್ನು ಶ್ರದ್ಧೆ, ಭಕ್ತಿ ಹಾಗೂ ವ್ಯಾಕುಲತೆಯಿಂದ ಆರಾಧಿಸಿ ಭಕ್ತಿ ಪರವಶರಾಗಿದ್ದರು. ಆದರೆ ಸ್ವಾಮಿ ವಿವೇಕಾನಂದರು ದೇಶದ ಭಾರತೀಯ ಧರ್ಮದಲ್ಲಿದ್ದ ಮೌಢ್ಯತೆ, ಸ್ತ್ರೀ ಕೀಳರಿಮೆ, ಬಾಲ್ಯವಿವಾಹ, ಮುಂತಾದ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸಿ ನಮ್ಮ ಸನಾತನ ಧರ್ಮದ ಹಿರಿಮೆಯನ್ನು ವಿಶ್ವ ವ್ಯಾಪಿ ಪಸರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆಂದು ಸ್ಮರಿಸಿದರು.
ತಮ್ಮ ಬುದ್ದಿ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂಸ್ಕಾರವನ್ನು ರೂಢಿಸಿಕೊಂಡಿರುವ ಯಾವುದೇ ವ್ಯಕ್ತಿ ತನ್ನ ದೇಶ ಅಥವಾ ಅನ್ಯ ಧರ್ಮದ ಮೇಲೆ ಕತ್ತಿ ಮಸೆಯುವ ದ್ವೇಷ ಭಾವನೆಯನ್ನು ಹೊರ ಹಾಕುವುದಿಲ್ಲ. ಭಾರತಾಂಬೆಯ ಮೇಲೆ ಅಭಿಮಾನವಿಟ್ಟಿರುವವರು ಇಂತಹ ಕೆಲಸಕ್ಕೆ ಎಂದಿಗೂ ಮುಂದಾಗುವುದಿಲ್ಲ. ಪ್ರತಿಯೊಬ್ಬರಲ್ಲೂ ಮಾನವೀಯತೆ ನೆಲೆಸಬೇಕು. ಧರ್ಮಾಂಧತೆ, ಮತಾಂಧತೆಯಿಂದ ದೂರವಿರಬೇಕು. ಸಮ ಸಮಾಜದ ನಿರ್ಮಾಣಕ್ಕೆ ವಿಶ್ವಮಾನವರಾಗಿ ಬಾಳ್ವೆ ನಡೆಸಬೇಕೆಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಪಾಲಿಸಬೇಕು ಎಂದರು.
ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮಚಂದ್ರ ವನವಾಸಕ್ಕೆ ತೆರಳಿದಾಗ ಮಡದಿ ಸೀತಾಮಾತೆಯು ಅವರನ್ನು ಹಿಂಬಾಲಿಸುತ್ತಾರೆ. ಸಹೋದರರು ಶ್ರೀರಾಮನ ಆದರ್ಶಗಳನ್ನೇ ಅನುಸರಿಸುತ್ತಾರೆ. ಇದು ಇಂದಿನ ತಲೆಮಾರಿಗೆ ಸಾಧ್ಯವೇ ಎಂಬ ಬಗ್ಗೆ ಅರ್ಥೈಸಿಕೊಳ್ಳಬೇಕು. ಆ ಮೂಲಕ ಉತ್ತಮವಾಗಿ ಬಾಳ್ವೆ ನಡೆಸಬೇಕು. ಇದಕ್ಕಾಗಿ ಗಾಂಧೀಜಿ ಅವರು ಪ್ರಾಣ ತ್ಯಜಿಸುವ ಸಂದರ್ಭದಲ್ಲೂ ಹೇ ರಾಮ್ - ಶ್ರೀೀರಾಮ್ ಸಂಭೋಧಿಸಿದ್ದು. ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ನಮ್ಮ ಹಿರಿಯರ ಬಗ್ಗೆ ನಮ್ಮ ಧೋರಣೆಗಳು ಬದಲಾಗಬೇಕು. ಆ ಸಂಕುಲವನ್ನು ತಾತ್ಸಾರವಾಗಿ ಕಂಡರೆ ನಮಗೆ ಒಳಿತಾಗುವುದಿಲ್ಲ ಎಂಬ ಅರಿವಿರಬೇಕು. ಯುವ ಜನಾಂಗವನ್ನು ದೇವಾಲಯದತ್ತ ಕರೆ ತರುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಬಿ.ಟಿ.ಜಯರಾಂ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಭಜನಾ ಮಂಡಳಿ ಕಾರ್ಯದರ್ಶಿ ಚನ್ನಪ್ಪ, ಉಪಾಧ್ಯಕ್ಷ ಸುರೇಶ್, ಖಜಾಂಚಿ ನಾಗರಾಜು, ಸಹಕಾರ್ಯದರ್ಶಿ ಶೇಖರ್, ಟ್ರಸ್ಟಿ ರಾಜರತ್ನಂ ಉಪಸ್ಥಿತರಿದ್ದರು.