

ಕೊಳ್ಳೇಗಾಲ: ದೇವಾಂಗ ಸಮಾಜ 10 ವರ್ಷಕೊಮ್ಮೆ ನಡೆಸುವ ಶ್ರೀ ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬದ ಲಾಂಛನವನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ರಾಮಲಿಂಗ ಚೌಡೇಶ್ವರಿ ಪಟ್ಟಣದ ದೊಡ್ಡ ಕತ್ತಿಹಬ್ಬ ಸೇವಾ ಟ್ರಸ್ಟ್(ರಿ) ವತಿಯಿಂದ ದೊಡ್ಡ ಕತ್ತಿಹಬ್ಬದ ಲಾಂಛನ ಉದ್ಘಾಟನೆ ಹಾಗೂ ಕಾರ್ಯಕ್ರಮಗಳ ಚಾಲನೆ ಮಹೋತ್ಸವದಲ್ಲಿ ಮಾತನಾಡಿದರು.
ದೇವಾಂಗ ಸಮಾಜ ಹಲವು ವರ್ಷಗಳಿಂದ ವಿಶಿಷ್ಟವಾದ ಹಬ್ಬವನ್ನು ಆಚರಣೆ ಮಾಡುತ್ತಿದೆ. ಸಮಾಜದ ಕುಲ ದೇವರಾದ ದೇವರ ದಾಸಿಮಯ್ಯ ಹಾಗೂ ಶ್ರೀ ಚೌಡೇಶ್ವರಿ ದೇವಿಯ ಆರ್ಶೀವಾದದಂತೆ ದೊಡ್ಡ ಕತ್ತಿ ಹಬ್ಬವನ್ನು ಆಚರಣೆ ಮಾಡುತ್ತಿದೆ. ಪ್ರತಿ 10 ವರ್ಷಕೊಮ್ಮೆ ಹಬ್ಬವನ್ನು ಆಚರಣೆ ಮಾಡುವುದು ವಿಶೇಷವಾಗಿದೆ. ಹಿಂದೆ 1921, 1968, 1982, 1999, 2015 ರಲ್ಲಿ ದೊಡ್ಡ ಕತ್ತಿ ಹಬ್ಬ ಮಾಡಲಾಗಿದೆ. ಅಂತೆಯೇ, 2026 ಫೆ.4 ರಿಂದ ಫೆ.13 ರವರೆಗೆ ದೊಡ್ಡ ಕತ್ತಿ ಹಬ್ಬವನ್ನು ನಿಗದಿಗೊಂಡಿದೆ. ಸರ್ವ ಜನರ ಹಿತಕ್ಕೆ ನಡೆಯುವ ಈ ಹಬ್ಬ ಯಶಸ್ವಿಯಾಗಲಿ ಎಂದರು.
ಶ್ರೀ ರಾಮಲಿಂಗೇಶ್ವರ ಚೌಡೇಶ್ವರಿ ದೊಡ್ಡ ಕತ್ತಿಹಬ್ಬ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಸಿ.ಎಂ. ಪರಮೇಶ್ವರಯ್ಯ ಮಾತನಾಡಿ, ದೊಡ್ಡ ಕತ್ತಿ ಹಬ್ಬ ಆಚರಣೆಗಾಗಿ 6 ತಿಂಗಳಿನಿಂದ ಸಿದ್ಧತೆ ನಡೆಸಲಾಗುತ್ತಿದೆ. 2026 ಫೆ.4 ರಿಂದ 13ರವರೆಗೆ ನಡೆಯುವ ಹಬ್ಬಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದರು.
ಈ ವೇಳೆ ಕತ್ತಿ ಹಬ್ಬ ಕಾರ್ಯಕ್ರಮಕ್ಕೆ ಯಜಮಾನರನ್ನಾಗಿ ಅಣಾದ್ರಯ್ಯ ಅವರನ್ನು ತಾತ್ಕಾಲಿಕವಾಗಿ ನೇಮಕ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಂಗ ಸಮಾಜದ ಗುರುಗಳಾದ ಪೂಲಾ ಕುಮಾರಸ್ವಾಮಿ, ಮುಖಂಡ ಲಕ್ಷ್ಮಣ್, ಗಿರೀಶ್ ಬಾಬು, ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರು, ನಗರಸಭೆ ಅಧ್ಯಕ್ಷೆ ರೇಖಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಇದ್ದರು.