

ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2022-23ನೇ ಸಾಲಿನಲ್ಲಿ 9.84 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲು ನಿರ್ಧರಿಸಿದೆ. 29ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜೈರಾಜ್ ಬಿ.ರೈ ಅಧ್ಯಕ್ಷತೆಯಲ್ಲಿ ಉರ್ವ ಸೆಂಟಿನರಿ ಚರ್ಚ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿದ ಅಧ್ಯಕ್ಷ ಜೈರಾಜ್ ಬಿ.ರೈ, ಠೇವಣಾತಿ ಮತ್ತು ಸಾಲ ಸೇರಿ ಒಟ್ಟು ಸಾರ್ವಕಾಲಿಕ ದಾಖಲೆಯ 145 ಕೋಟಿ ರೂ. ವೃದ್ಧಿ ದಾಖಲಿಸಲಾಗಿದೆ. 453 ಕೋಟಿ ರೂ. ಠೇವಣಾತಿ, 382 ಕೋಟಿ ರೂ. ಸಾಲ, 835 ಕೋಟಿ ರೂ. ಮೀರಿದ ಒಟ್ಟು ವ್ಯವಹಾರ, 9.84 ಕೋಟಿ ರೂ. ನಿವ್ವಳ ಲಾಭ ಹಾಗೂ 3089 ಕೋಟಿ ರೂ. ಒಟ್ಟು ವಹಿವಾಟು ಇದೆ. ಕಳೆದ 16 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿ ಶೂನ್ಯ ಪ್ರಮಾಣದಲ್ಲಿದೆ ಎಂದರು. ಮಹಾಪ್ರಬಂಧಕ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿಂಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆ ಮಂಡಿಸಿದರು. 2022-23ನೇ ಸಾಲಿನಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು. ನಿರ್ದೇಶಕರಾದ ಎ.ರತ್ನಕಾಂತಿ ಶೆಟ್ಟಿ, ಕೆ.ಸೀತಾರಾಮ ರೈ ಸವಣೂರು, ಡಾ ಕೆ.ಸುಭಾಶ್ಚಂದ್ರ ಶೆಟ್ಟಿ, ಪಿ.ಎಸ್.ಅಡ್ಯಂತಾಯ, ಸಿಎ ಎಚ್.ಆರ್.ಶೆಟ್ಟಿ, ವಿಠಲ ಪಿ.ಶೆಟ್ಟಿ, ಎಂ.ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ.ದಿವಾಕರ ರೈ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಎಂ.ಸುಧಾಕರ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಕ್ ಉಪಸ್ಥಿತರಿದ್ದರು. ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
-----------------------
ಸಂಘದ ಕೇಂದ್ರ ಕಚೇರಿ ಕಟ್ಟಡದ ನಿರ್ಮಾಣವನ್ನು 2024ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಹೊಸ ಶಾಖೆ ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಕೋರ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷಾಂತ್ಯಕ್ಕೆ 1 ಸಾವಿರ ಕೋಟಿ ರೂ. ವ್ಯವಹಾರ ದಾಖಲಿಸುವ ನಿರೀಕ್ಷೆ ಇದೆ.
ಜೈರಾಜ್ ಬಿ.ರೈ
ಅಧ್ಯಕ್ಷರು, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ