

ಹೊಳೆನರಸೀಪುರ: ಶ್ರೀರಾಮದೇವರ ದಕ್ಷಿಣ ನಾಲೆಯು ಕೊಳಚೆ ನೀರಿನಿಂದ ಸಂಪೂರ್ಣ ಮಲಿನಗೊಂಡು ಜನ, ಜಾನುವಾರುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ತಾಲೂಕಿನ ಕಟ್ಟೆ ಬೆಳಗುಲಿ ಸಮೀಪ ಸುಮಾರು 1870ರಲ್ಲಿ ಜಿಲ್ಲೆಯ ಜೀವನಾಡಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶ್ರೀರಾಮದೇವರ ಅಣೆಕಟ್ಟು ರೈತರ ಬದುಕಿಗೆ ಬೆನ್ನೆಲುಬಾಗಿದೆ. ಹೇಮಾವತಿ ನದಿಯ ಶ್ರೀರಾಮ ದೇವರು ಅಣೆಕಟ್ಟೆಗೆ ದಕ್ಷಿಣನಾಲೆ ಹಾಗೂ ಉತ್ತರನಾಲೆ ಎಂಬ ಎರಡು ಕಾಲುವೆಗಳು ತಾಲೂಕಿನ ಅನ್ನದಾತರಿಗೆ ನೀರಾವರಿ ಸೌಲಭ್ಯ ಒದಗಿಸುವ ಪ್ರಮುಖ ಮೂಲಗಳಾಗಿವೆ. ಶ್ರೀರಾಮದೇವರ ಅಣೆಕಟ್ಟೆಯಿಂದ ಪ್ರಾರಂಭವಾದ ದಕ್ಷಿಣ ನಾಲೆ ಹೊಳೆನರಸೀಪುರದ ನರಸಿಂಹನಾಯಕ ನಗರ, ಗಾಂಧಿನಗರ, ಎಪಿಎಂಸಿ, ಸೀತಾ ವಿಲಾಸ ರಸ್ತೆ, ಆಸ್ಪತ್ರೆ ಹಿಂಭಾಗ, ಕೋಟೆ ಮೈಸೂರು ರಸ್ತೆ, ವಿದ್ಯುತ್ ನಗರ ಒಳಗೊಂಡಂತೆ ಪಟ್ಟಣದೊಳಗೆ 1.2 ಕಿ.ಮೀ. ಉದ್ದ ಹಾದುಹೋಗಿದೆ.
ಪಟ್ಟಣದೊಳಗಿರುವ ನಾಲೆಗೆ ಪಟ್ಟಣದ ಸ್ವಚ್ಛತೆ ಹಾಗೂ ನಾಗರಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕವರ್ ಡಕ್ ನಿರ್ಮಿಸಲಾಗಿದ್ದು, ಸಂಚಾರಕ್ಕೆ ಸುಗಮವಾಗಿದೆ. ಅಂಗಡಿಗಳು, ಗುಜರಿ, ತರಕಾರಿ, ಹಣ್ಣು ಮಾರುಕಟ್ಟೆಯನ್ನು ಇದರ ಬದಿಯಲ್ಲಿ ನಡೆಸಲಾಗುತ್ತಿದೆ. ಆದರೆ ನಾಲಾ ಸ್ವಚ್ಛತೆಗೆ ಅಲ್ಲಲ್ಲಿ ಕವರ್ ಡೆಕ್‌ಗೆ ಕಿಂಡಿಗಳನ್ನು ಬಿಡಲಾಗಿದೆ. ಅದರ ಮೂಲಕ ಕಸ, ಘನತ್ಯಾಜ್ಯ ಹಾಕಲಾಗುತ್ತಿದೆ. ಚರಂಡಿ ನೀರು, ಒಳಚರಂಡಿ ನೀರು ಈ ಕಾಲುವೆಗೆ ಸೇರಿ ಮಲಿನವಾಗುತ್ತಿದೆ. ಈ ಅವ್ಯವಸ್ಥೆಯಿಂದ ಕಾಲುವೆ ನೀರು ದುರ್ವಾಸನೆ ಹರಡುತ್ತಿದೆ. ಪಟ್ಟಣದಲ್ಲಿ ವಿಷಪೂರಿತ ತ್ಯಾಜ್ಯ ಬಿಸಾಡುವ ಮೂಲಕ ದಕ್ಷಿಣ ನಾಲೆ ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ಕೊಳೆತ ವಸ್ತುಗಳು ಪ್ಲಾಸ್ಟಿಕ್, ಮದ್ಯದ ಬಾಟಲಿಗಳು ಕಾಲುವೆಗೆ ಸೇರುತ್ತಿದೆ. ನಾಲೆ ಬದಿಯ ಬಡಾವಣೆಯ ಮನೆಗಳ ಕೊಳಚೆ ನೀರು ಕಾಲುವೆಗೆ ಸೇರುತ್ತಿದೆ.
ಪುರಸಭೆಯ ಆಡಳಿತದ ವೈಫಲ್ಯದಿಂದ ಪಟ್ಟಣದ ಯುಜಿಡಿ ನೀರು, ಚರಂಡಿಯ ಕೊಳಚೆ ನೀರು ಕಾಲುವೆಗೆ ಸೇರುವ ಮೂಲಕ ಮಲಿನಗೊಳಿಸಲಾಗುತ್ತಿದೆ. ಮಾಲಿನ್ಯ ತಡೆಗಟ್ಟಬೇಕಾದ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ನಾಲೆ ನೀರು ಸಂಪೂರ್ಣ ವಿಷಪೂರಿತವಾಗಿದ್ದು, ಬಿಳಿಯ ನೊರೆಯಂತೆ ನೀರು ಮುಂದೆ ಸಾಗುತ್ತಿದೆ. ಕೆಟ್ಟ ವಾಸನೆ ಹರಡುತ್ತಿದೆ. ಮಲ್ಲಪ್ಪನಹಳ್ಳಿಯ ಮುಂದಿನ ಗ್ರಾಮಗಳ ನಾಗರಿಕರು ನಿತ್ಯ ಈ ನೀರನ್ನೇ ಜಾನುವಾರುಗಳಿಗೆ ಕುಡಿಯಲು, ಕೃಷಿ ಚಟುವಟಿಕೆಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ನಾಗರಿಕರು, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾಗುವವರು ಚರ್ಮ ಸಮಸ್ಯೆಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.