

*ಮರ್ಕಟಗಳು ಓಡಾಡುತ್ತಿದ್ದರಿಂದ ಊರಿಗೆ ಬಂತು ಹೆಸರು
*ಮರ್ಯಾದಾ ಪುರುಷೋತ್ತಮನ ಆರಾಧನೆಯೇ ಹೆಚ್ಚು
ಚೇತನ್ ಚಕ್ಕೆರೆ ಬಿಡದಿ
ಶ್ರೀರಾಮ ಎಂದ ತಕ್ಷಣ ನೆನಪಾಗೋದು ಆಂಜನೇಯ. ಅದೇರೀತಿ ಇಲ್ಲೊಂದು ಗ್ರಾಮಕ್ಕೆ ಶ್ರೀರಾಮನ ನಂಟು ಹಾಗೂ ವಾನರರ ಓಡಾಟ ಇದ್ದುದರಿಂದ ಆ ಗ್ರಾಮಕ್ಕೆ ವಾನರರ ಹೆಸರನ್ನು ಕೂಡ ನಾಮಕರಣ ಮಾಡಲಾಗಿತ್ತು. ಈಗ ವಾಜರಹಳ್ಳಿ ಎಂದು ಕರೆಯಲ್ಪಡುವ ಈ ಗ್ರಾಮ, ಬಹಳ ವರ್ಷಗಳ ಹಿಂದೆ ವಾನರಹಳ್ಳಿಯಾಗಿತ್ತು. ವಾನರರಹಳ್ಳಿ ಎಂದು ಹೇಳಲು ಸಾಕಷ್ಟು ನಿದರ್ಶನಗಳಿವೆ ಎನ್ನಲಾಗಿದೆ.
ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ವ್ಯವಸಾಯವನ್ನೇ ನಂಬಿ ಜನ ಜೀವನ ನಡೆಸುತ್ತಾರೆ. ಇದರ ಜತೆಗೆ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ತಾವು ಹಾಕಿದ ಬೆಳೆಗಳು ಚೆನ್ನಾಗಿ ಬಂದು, ಕಟಾವು ಮಾಡುವ ಸಮಯದಲ್ಲಿ ಯಾವುದೇ ವಿಘ್ನಗಳು ಬಾರದೆ ಇರಲಿ ಎಂದು ತುಳಸಿ ಹಬ್ಬ ಆಚರಿಸಲಾಗುತ್ತದೆ. ಅಂದು ಶ್ರೀನಿವಾಸ, ‘ಭೂದೇವಿ, ಶ್ರೀದೇವಿಯ ವಿಗ್ರಹಗಳನ್ನು ಹೂವಿನ ಮಂಟಪದಲ್ಲಿ ಕೂರಿಸಿ ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಿ, ಹಬ್ಬದ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತದೆ.
ಶ್ರೀರಾಮಚಂದ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ತಪಸ್ಸು ಮಾಡಿದ್ದ ಹಾಗೂ ಈ ಬೆಟ್ಟಕ್ಕೆ ನಂಟಿತ್ತು ಎಂದು ಹೇಳಲಾಗುತ್ತದೆ. ರಾಮನಗರದಿಂದ ಬಂದ ಶ್ರೀರಾಮ ಇದೇ ವಾನರಹಳ್ಳಿಯಲ್ಲಿ ತಪಸ್ಸು ಮಾಡಿದ್ದ ಎಂದೂ ಇತಿಹಾಸದಲ್ಲಿ ಉಲ್ಲೇಖವಿದೆ. ಹಾಗಾಗಿ ಈ ಗ್ರಾಮದಲ್ಲಿ ಶ್ರೀರಾಮನನ್ನು ಹೆಚ್ಚಾಗಿ ಪೂಜಿಸುತ್ತಾರೆ. ಎರಡು ಬಾರಿ ಈ ಗ್ರಾಮಕ್ಕೆ ಶ್ರೀರಾಮ ಬಂದು ಹೋಗಿದ ಎಂಬುದು ಗ್ರಾಮದ ಹಿರಿಯರ ನಂಬಿಕೆ.
ರಾಮ ಎಲ್ಲೊ ಹನುಮ ಅಲ್ಲೆ ಎಂಬ ಮಾತಿನಂತೆ, ಶ್ರೀರಾಮ ಈ ಗ್ರಾಮಕ್ಕೆ ತಪಸ್ಸು ಮಾಡಲು ಬಂದಾಗ ಸಾಕಷ್ಟು ವಾನರರೂ ಬಂದಿದ್ದರಂತೆ. ಹಾಗಾಗಿ ಈ ಗ್ರಾಮಕ್ಕೆ ವಾನರರಹಳ್ಳಿ ಎಂದು ಹೆಸರಾಗಿದೆ ಎನ್ನಲಾಗಿದೆ. ಶ್ರೀರಾಮ ಬಂದು ಹೋದ ಮೇಲೂ ಸಾಕಷ್ಟು ವಾನರರು ಇಲ್ಲೆ ಉಳಿದುಕೊಂಡವು. ಅವುಗಳನ್ನು ಇಲ್ಲಿನ ಜನರು ಬಹಳ ಶ್ರದ್ಧೆ, ಭಕ್ತಿಯಿಂದ ಉಪಚಾರ ಮಾಡಿ ನೋಡಿಕೊಂಡಿದ್ದರು ಎಂಬ ಪ್ರತೀತಿ ಇದೆ.
ವಾನರರು ಹೆಚ್ಚಾಗಿದ್ದ ಕಾರಣಕ್ಕೆ ವಾನರರಹಳ್ಳಿ ಎಂದು ನಾಮಕರಣ ಮಾಡಲಾಗಿದ್ದ ಗ್ರಾಮ, ಇಂದು ವಾಜರಹಳ್ಳಿಯಾಗಿ ಮರು ನಾಮಕರಣವಾಗಿದೆ. ವರ್ಷ ಕಳೆದಂತೆ, ಈ ಗ್ರಾಮಕ್ಕೆ ವಿಶ್ವಕರ್ಮ ಸಮುದಾಯದವರು ಬಂದು ನೆಲೆಕಂಡರು. ಕಾಲ ಕ್ರಮೇಣ ಸಾಕಷ್ಟು ವಿಶ್ವಕರ್ಮರು ಬಂದು ಇಲ್ಲಿ ಸೇರಿಕೊಂಡರು. ನಂತರ ವಾನರರಹಳ್ಳಿ ಇದ್ದದ್ದನ್ನು ವಾಜರಹಳ್ಳಿ ಎಂದು ಮಾಡಲಾಯಿತು ಎನ್ನಲಾಗಿದೆ. ಈಗ ವಾಜರಹಳ್ಳಿ ಹೆಸರು ಚಾಲ್ತಿಯಲ್ಲಿದೆ.
ವಾಜರಹಳ್ಳಿಯಲ್ಲಿ ಹನುಮಂತರಾಯಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ದಕ್ಷಿಣಾಭಿಮುಖವಾಗಿ ಹನುಮಂತರಾಯಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಎಂದರೆ, ಈ ಆಂಜನೇಯಮೂರ್ತಿಯನ್ನು ವ್ಯಾಸರಾಯರು ಕೆತ್ತನೆ ಮಾಡಿದ್ದಾರೆ.