ಶ್ರೀರಾಮ ರಂಗಸಂಭ್ರಮ 22ರಿಂದ

BLY- 19-2
ಪ್ರಭುದೇವ ಕಪ್ಪಗಲ್ಲು
Published on

ಬಳ್ಳಾರಿ : ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಲಿರುವ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಹಿನ್ನೆಲೆ ಬಳ್ಳಾರಿಯ ರಂಗತೋರಣದ ವತಿಯಿಂದ ಜ.22ರಿಂದ ಮೂರು ದಿನಗಳ ಕಾಲ ಶ್ರೀರಾಮ ರಂಗ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರಾಜಕುಮಾರ ರಸ್ತೆಯಲ್ಲಿರುವ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಟಕ, ಬಯಲಾಟ, ತೊಗಲುಗೊಂಬೆ ಆಟ, ಸಂಗೀತ, ನೃತ್ಯ, ಉಪನ್ಯಾಸಗಳು ಶ್ರೀರಾಮನ ದರ್ಶನ ಮಾಡಿಸಲಿವೆ ಎಂದು ತಿಳಿಸಿದರು.

22 ರಂದು ಸಂಜೆ 5.30ಕ್ಕೆ ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ.ಚನ್ನಪ್ಪ , ವಕೀಲ ವಿ.ಜನಾರ್ಧನ, ಬಯಲಾಟದ ಮೇಷ್ಟ್ರು ಇ.ಹನುಮಾವಧೂತ ಹಾಗೂ ರಂಗತೋರಣದ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಸಿರಿಗೇರಿಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಎಚ್.ತಿಪ್ಪೇಸ್ವಾಮಿ ನಿರ್ದೇಶನದ ‘ರಾಮ ರಾವಣ ಯುದ್ಧ’ ಬಯಲಾಟವನ್ನು ಪ್ರಸ್ತುತಪಡಿಸಲಿದ್ದಾರೆ. ಅದಕ್ಕೂ ಮುನ್ನ ಪದ್ಮಾವತಿ ಹಾಗೂ ಪ್ರಕೃತಿ ರೆಡ್ಡಿ ಅವರು ಶ್ರೀರಾಮನ ಕುರಿತ ಗೀತ ಗಾಯನವನ್ನು, ಸುನಿತಾ ಕೊಳಗಲ್ಲು ಅವರು ವೀಣಾ ವಾದನವನ್ನು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

23 ರಂದು ಸಂಜೆ 5.30ಕ್ಕೆ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಸ್.ಜೆ.ವಿ. ಮಹಿಪಾಲ, ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಉಪಾಧ್ಯಕ್ಷ ಎಸ್.ದೊಡ್ಡನಗೌಡ ಹಾಗೂ ವಿಮ್ಸ್‌ನ ಪ್ರಾಧ್ಯಾಪಕ ಡಾ.ಎನ್. ಕೊಟ್ರೇಶ್ ಪಾಲ್ಗೊಳ್ಳಲಿದ್ದಾರೆ. ಧಾರವಾಡದ ವಕೀಲ ಅನೂಪ್ ದೇಶಪಾಂಡೆ ಅವರು ಶ್ರೀರಾಮನ ಆದರ್ಶಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ನಂತರ ವಿಶ್ವ ವಿಖ್ಯಾತ ಬೆಳಗಲ್ಲು ವೀರಣ್ಣ ಅವರ ರಾಮಾಂಜಿನೇಯ ತೊಗಲುಗೊಂಬೆ ಮೇಳವು ‘ಲಂಕಾ ದಹನ’ ತೊಗಲುಗೊಂಬೆ ಆಟವನ್ನು ಪ್ರಸ್ತುತಪಡಿಸಲಿದ್ದಾರೆ. ಡಾ. ಚಾರುಲತಾ ಅವರ ಶ್ರೀನಿಧಿ ಆರ್ಟ್ಸ್ ತಂಡವು ‘ಅಯೋಧ್ಯ ರಾಮ’ ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ ಎಂದರು.

24 ರಂದು ಸಂಜೆ 5.30ಕ್ಕೆ ಹೈದರಾಬಾದಿನ ಸಾಮಾಜಿಕ ಸಮರಸತಾ ವೇದಿಕೆಯ ಸಂಯೋಜಕ ಅಪ್ಪಾಲ ಪ್ರಸಾದ್ ಅವರು ಶ್ರೀರಾಮನ ಆದರ್ಶಗಳ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ, ತೆಲುಗು ಸಾಂಸ್ಕೃತಿಕ ಸಂಘದ ಶ್ರೀಗಾದೆಂ ಗೋಪಾಲಕೃಷ್ಣ, ಎಪಿಎಂಸಿ ವರ್ತಕ ಪಾಲಣ್ಣ, ಭೀಮನೇನಿ ಭಾಸ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದು, ನಂತರ ಹೈದರಾಬಾದಿನ ಸುಪ್ರಸಿದ್ಧ ಸುರಭಿ ನಾಟ್ಯ ಮಂಡಳಿಯಿಂದ ‘ಶ್ರೀರಾಮ ರಾಜ್ಯಂ’ ತೆಲುಗು ನಾಟಕವನ್ನು ಪ್ರದರ್ಶಿಸಲಿದ್ದಾರೆ. ಮೂನ್ ವಾಕರ್ಸ್ ಡಾನ್ಸ್ ಅಕಾಡೆಮಿಯ ಸದಸ್ಯರು ಶ್ರೀ ರಾಮನ ಕುರಿತಂತೆ ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯ ಎಚ್.ತಿಪ್ಪೇಸ್ವಾಮಿ, ಶ್ರೀರಾಮ ರಂಗ ಸಂಭ್ರಮದ ಸಂಚಾಲಕ ಅಡವಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net