

ಶಿವಮೊಗ್ಗ: ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಗ್ರಾಮ ಗ್ರಾಮಗಳಲ್ಲೂ ಶ್ರೀರಾಮ ಇದ್ದಾನೆ. ಹಾಗಾದರೆ ಅಯೋಧ್ಯೆಗೆ ಹೋಗದ ಶೇ.30 ಹಿಂದುಗಳು ರಾಮನ ವಿರೋಧಿಗಳಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.
ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿದ ಸಂಬಂಧ ರಾಜ್ಯ ಸರ್ಕಾರಕ್ಕೆ ರಾಮಭಕ್ತರ ಶಾಪ ತಟ್ಟುತ್ತದೆಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸೋಮವಾರ ಪ್ರತಿಕ್ರಿಯೆ ನೀಡಿ, ಅವರೇನು ಶ್ರೀರಾಮನನ್ನು ಅಡವಿಟ್ಟುಕೊಂಡಿದ್ದಾರಾ ಎಂದು ಕಿಡಿಕಾರಿದರು.
ನಿಜ ಹೇಳಬೇಕೆಂದರೆ ಅಶೋಕ್ ಅವರೇ ಹಿಂದು ಮತ್ತು ರಾಮನ ವಿರೋಧಿಯಾಗಿದ್ದಾರೆ. ರಾಜಕಾರಣದಲ್ಲಿ ಅಂಬೇಡ್ಕರ್ ಹೇಳಿಕೊಟ್ಟಿದ್ದನ್ನು ಮಾಡಬೇಕು. ಆದರೆ ಇವರು ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ರಾಮ ಮತ್ತು ಧರ್ಮವನ್ನು ಜಾತಿ ರಾಜಕಾರಣಕ್ಕೆ ತರುವುದನ್ನು ಖಂಡಿಸುತ್ತೇನೆ ಎಂದರು.