ಜ.22ರಂದು ಶ್ರೀರಾಮದೇವರ ವಿಗ್ರಹ ಪ್ರತಿಷ್ಠಾಪನೆ: ನಗರಸಭೆ ಸದಸ್ಯ ನಾಗೇಶ್ ಹೇಳಿಕೆ

Sri Rama idol installation ceremony mandya
Published on

ಮಂಡ್ಯ: ನಗರದ ಉದಯಗಿರಿ ಲೇಬರ್ ಕಾಲನಿ 3ನೇ ಕ್ರಾಸ್‌ನಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀರಾಮಮಂದಿರದಲ್ಲಿ ಜ.19ರಿಂದ 22ರವರೆಗೆ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ. 22ರಂದು ಶ್ರೀರಾಮದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ನಗರಸಭೆ ಸದಸ್ಯ ನಾಗೇಶ್ ತಿಳಿಸಿದರು.

ಶ್ರೀರಾಮ ಸೇವಾ ಸಮಿತಿಯಿಂದ ಮಹೋತ್ಸವ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಹಾಗಣಪತಿ, ಧಾನ್ಯಲಕ್ಷ್ಮೀ, ಲಕ್ಷ್ಮಣ ಹನುಮ ಸಮೇತ ಸೀತಾ ರಾಮಚಂದ್ರ ದೇವರ ನೂತನ ಬಿಂಬ ಸಮರ್ಪಣಾಪೂರ್ವಕ ಪ್ರತಿಷ್ಠಾಪನೆ, ಅಷ್ಠಬಂಧ ಬ್ರಹ್ಮಕಲಶ ಮಹೋತ್ಸವ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವೇದಮೂರ್ತಿ ಗಣಪತಿಭಟ್ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. 19ರಂದು ಬೆಳಗ್ಗೆ 9.30ಕ್ಕೆ ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ ಹರಿವಿಠಲ ದಾಸರಿಂದ ಹನುಮದ್ವಿಲಾಸ ಪ್ರವಚನ ಏರ್ಪಡಿಸಲಾಗಿದೆ. 20ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. 21ರಂದು ಬೆಳಗ್ಗೆ 10ಕ್ಕೆ ವ್ಯಾಸರಾಜಮಠದ ಕೃಷ್ಣ ಭಜನಾ ಮಂಡಳಿಯಿಂದ ಸಂಕೀರ್ತನ ಕಾರ್ಯಕ್ರಮ, ಸಮೀರಾಚಾರ್ ಅವರಿಂದ ಶ್ರೀರಾಮದೇವರ ವ್ಯಕ್ತಿತ್ವ ಕುರಿತ ಪ್ರವಚನ ಆಯೋಜಿಸಲಾಗಿದೆ ಎಂದರು.

22ರಂದು ಮುಂಜಾನೆ 5.30ಕ್ಕೆ ಅದಿವಾಸ ಹೋಮ, ಪ್ರತಿಷ್ಠಾಪನಾಂಗ ಹೋಮದೊಂದಿಗೆ ಶ್ರೀರಾಮದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಶ್ರೀರಾಮತಾರಕ ಹೋಮ, ಫಲಪಂಚಾಮೃತ ಸಹಿತ ಮಹಾಭಿಷೇಕ ನಡೆಸಲಾಗುತ್ತದೆ. ಗುರುಪ್ರಸಾದಾಚಾರ್ ಅವರು ಅಯೋಧ್ಯಾ ಕ್ಷೇತ್ರ ಮಹಾತ್ಮೆ ಕುರಿತು ಪ್ರಚನ ನೀಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಅನ್ನದಾಸೋಹ, ಸಂಜೆ 5.30ಕ್ಕೆ ಅರವಿಂದಾಚಾರ್ ಅವರಿಂದ ಸೀತಾಕಲ್ಯಾಣ ಪ್ರವಚನ, ಸಂಜೆ 6.30ಕ್ಕೆ ಸಿಂಚನ ಗೋಪಾಲ್ ಮತ್ತು ತಂಡದವರಿಂದ ದಾಸವಾಣಿ ಸಂಗೀತ ಕಾರ‌್ಯಕ್ರಮ, ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ ನಡೆಯಲಿದೆ. 22ರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಎಂ.ಎಸ್.ಆತ್ಮಾನಂದ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆಂದು ವಿವರಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಮಾದಯ್ಯ, ತಿಮ್ಮಯ್ಯ, ಚಂದ್ರು, ಮಲ್ಲೇಶ್, ಕುಶ, ಜಗದೀಶ್, ಮನು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net