

ಹುಬ್ಬಳ್ಳಿ: ನಾವು ಶ್ರದ್ಧಾ-ಭಕ್ತಿಯಿಂದ ರಾಮನನ್ನು ಪೂಜಿಸುತ್ತೇವೆ. ಕಾಂಗ್ರೆಸ್‌ನವರು ನಿಜವಾದ ಹಿಂದುಗಳು. ಬಿಜೆಪಿಯವರು ಚುನಾವಣೆಗಾಗಿ ಶ್ರೀರಾಮ ಹಾಗೂ ಹಿಂದುತ್ವ ಬಳಸಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವತ್ತು ಕೂಡ ರಾಜಕಾರಣಕ್ಕಾಗಿ ಹಿಂದುತ್ವ ಮತ್ತು ಶ್ರೀರಾಮನನ್ನು ತೆಗೆದುಕೊಂಡಿಲ್ಲ ಎಂದರು.
ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಕಾಂಗ್ರೆಸ್‌ನವರು ದೇವರು ಮತ್ತು ಹಿಂದುತ್ವವನ್ನು ರಾಜಕಾರಣದಲ್ಲಿ ತಂದಿಲ್ಲ. ಬಿಜೆಪಿಯವರು ಮತಕ್ಕಾಗಿ ಶ್ರೀರಾಮನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಏನೂ ಬಂಡವಾಳ ಇಲ್ಲ ಎಂದು ದೂರಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಿಮಿಕ್ ಮಾಡುತ್ತಿದ್ದಾರೆ. ಅವರು ಅಂಕಿ-ಅಂಶ ಇಟ್ಟುಕೊಂಡು ಮಾತನಾಡಬೇಕು. ರಾಜಕಾರಣಕ್ಕಾಗಿ ಮಾತನಾಡುವ ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪುಕ್ಸಟ್ಟೆ ಅಧಿಕಾರಕ್ಕೆ ಬಂದ ಬಿಜೆಪಿಯವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ. ಅವರು ಕೆಲಸ ಮಾಡಲ್ಲ, ಮಾಡುವವರಿಗೂ ಬಿಡುವುದಿಲ್ಲ. ಆಗುವುದಕ್ಕೆ ಹರಕತ್ತು, ಆಗದಿರುವುದಕ್ಕೆ ಕುಮ್ಮಕ್ಕು ಎನ್ನುವುದು ಬಿಜೆಪಿಯವರ ಕಥೆ. ಅವರ ಮಾತಿಗೆ ಕಿಮ್ಮತ್ತಿಲ್ಲ. ಜನರೇ ಅವರನ್ನು ಮನೆಗೆ ಕಳುಹಿಸಿದರು. ನಾವು ಜನಪರ ಕೆಲಸ ಮಾಡುತ್ತಿದ್ದೇವೆ. ಪ್ರತಿದಿನ 60 ಲಕ್ಷ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿದ್ದಾರೆ. ಅವರ ಶಾಪ ಬಿಜೆಪಿಗೆ ತಟ್ಟುತ್ತದೆ ಎಂದರು. ಮೂವರು ಡಿಸಿಎಂಗಳ ಬೇಡಿಕೆ ಇಟ್ಟಿರುವುದು ಏನೂ ತಪ್ಪಿಲ್ಲ, ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಮೊಗಮ್ಮಾಗಿ ನುಡಿದರು.