

ಹುಬ್ಬಳ್ಳಿ : ಕಾಶ್ಮೀರದ ಹಿಂದುಗಳ ಸುರಕ್ಷತೆಗಾಗಿ ಪನೂನು ಕಾಶ್ಮೀರ ಸಂಘಟನೆಯಿಂದ ಜಮ್ಮುವಿನಲ್ಲಿ ಜು. 13ರಂದು ಆಯೋಜಿಸಿರುವ ಅಖಿಲ ಭಾರತ ಮಟ್ಟದ ಹಿಂದು ಅಧಿವೇಶನಕ್ಕೆ ಶ್ರೀರಾಮ ಸೇನೆಯನ್ನೂ ಆಹ್ವಾನಿಸಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಈ ಸಮಾವೇಶದಲ್ಲಿ ಭಾರತದ 48 ಹಾಗೂ ವಿದೇಶದ 26 ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ. ನನ್ನೊಂದಿಗೆ ಸೇನಾದ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರೂ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿರುವುದೇ ದೊಡ್ಡ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಬೀಗುತ್ತಿದೆ. ಆದರೆ, ಇದುವರೆಗೆ ಕಾಶ್ಮೀರಿ ಹಿಂದುಗಳಲ್ಲಿ ಮೊದಲಿನ ಆತ್ಮವಿಶ್ವಾಸ ಮೂಡಿಸಲು ಅಗತ್ಯ ಕ್ರಮವನ್ನು ಸರ್ಕಾರ ತೆಗೆದುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದನ್ನು ಒಪು್ಪತ್ತೇವೆ. ಆದರೆ, ಕಾಶ್ಮೀರಿ ಹಿಂದುಗಳು ಆ ರಾಜ್ಯದಲ್ಲಿ ನಿರ್ಭಯ ಹಾಗೂ ನೆಮ್ಮದಿಯಿಂದ ವಾಸಿಸುವಂತಹ ಪರಿಸ್ಥಿತಿ ನಿರ್ವಿುಸಿಲ್ಲ ಎಂದು ದೂರಿದರು.
ಕಾಶ್ಮೀರಿ ಹಿಂದುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಕಾಶ್ಮೀರಿ ಹಿಂದುಗಳ ರಕ್ಷಣೆಗೆ ಅಧಿವೇಶನ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬೆಂಬಲಿಸುವುದಾಗಿ ತಿಳಿಸಿದರು.
5 ಲಕ್ಷ ಜನ ಕಾಶ್ಮೀರಿ ಹಿಂದುಗಳಿಗೆ ಪುನಃ ನೆಲೆ ಒದಗಿಸುವ ಜತೆಗೆ ಅವರಿಗೆ ಸಂಪೂರ್ಣ ಸುರಕ್ಷತೆ ನೀಡಬೇಕು. ಹಿಂದುಗಳಿಗೆ ಮನೆ, ತೋಟ, ದೇವಸ್ಥಾನಗಳನ್ನು ಒದಗಿಸಬೇಕು. ಸರ್ಕಾರದಿಂದ ಪ್ರತಿ ಹಿಂದುವಿನ ಮನೆಗೆ ಶಸ್ತ್ರಾಸ್ತ್ರ ನೀಡಬೇಕು. ಕಾಶ್ಮೀರಿ ಹಿಂದುಗಳಿಗೆ ರಾಜಕೀಯ ಪ್ರತಿನಿಧಿ ಮೀಸಲು ಕೊಡಬೇಕು ಎಂಬ ಉದ್ದೇಶಗಳನ್ನು ಇಟ್ಟುಕೊಂಡು ಜಮ್ಮುವಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಮಧ್ಯೆ ಪಾಕಿಸ್ತಾನದೊಂದಿಗೆ ಹಾಕಿ ಆಡಲು ಹಾಗೂ ಬಾಂಗ್ಲಾ ದೇಶದೊಂದಿಗೆ ಕ್ರಿಕೆಟ್ ಆಡಲು ಮುಂದಾಗಿರುವ ಕೇಂದ್ರ ಸರ್ಕಾರ ನಿರ್ಧಾರ ಖಂಡನೀಯ. ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದೇವಾಲಯಗಳನ್ನು ದ್ವಂಸಗೊಳಿಸಲಾಗುತ್ತಿದೆ. ಆದರೂ, ಕೇಂದ್ರ ಸರ್ಕಾರ ಆ ದೇಶಗಳೊಂದಿಗೆ ಕ್ರೀಡಾ ಸಂಬಂಧ ಇಟ್ಟುಕೊಂಡಿರುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳೊಂದಿಗಿನ ಕ್ರೀಡೆಗಳಿಂದಾಗುವ ವ್ಯವಹಾರ ಮುಖ್ಯವೋ ಅಥವಾ ದೇಶದ ಜನರ ಜೀವ ಮುಖ್ಯವೋ ? ಎಂದು ಪ್ರಶ್ನಿಸಿದರು.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೇಹಾ ಕೊಲೆ ಆರೋಪಿಗೆ ಜಾಮೀನು ಸಿಕ್ಕರೆ ಹೋರಾಟ</p><p>ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ನಡೆದು ಹಲವಾರು ತಿಂಗಳುಗಳು ಕಳೆದರೂ ಆಕೆಯ ಸಾವಿಗೆ ಸರ್ಕಾರ ನ್ಯಾಯ ಒದಗಿಸಿಲ್ಲ. ತ್ವರಿತ ನ್ಯಾಯಾಲಯ ಸ್ಥಾಪಿಸಿ, ವಿಚಾರಣೆ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿಯವರು, ತಮ್ಮ ಭರವಸೆಯನ್ನು ಮರೆತಂತೆ ಕಾಣುತ್ತಿದ್ದಾರೆ ಎಂದು ಪ್ರಮೋದ ಮುತಾಲಿಕ ಟೀಕಿಸಿದರು.
ಇದೀಗ ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ಕೋರಿ ಕೆಲವು ಮುಸ್ಲಿಂ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಆರೋಪಿಗೆ ಜಾಮೀನು ಸಿಕ್ಕರೆ ಜಮಾತೆ ಇಸ್ಲಾಂ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರಮೋದ ಮುತಾಲಿಕ, ಜಾಮೀನು ಸಿಕ್ಕರೆ ಅದಕ್ಕೆ ರಾಜ್ಯ ಸರ್ಕಾರವನ್ನೇ ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಬಡಿಗೇರ, ಅಣ್ಣಪ್ಪ ದಿವಟಗಿ, ಬಸು ದುರ್ಗದ, ಪೂರ್ಣಿಮಾ ಕಾಡಮ್ಮನವರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.