

ಗದಗ: ನಿಷೇಧಾಜ್ಞೆ ಮೀರಿ ನಗರದ ತೋಂಟದಾರ್ಯ ಮಠದ ಆವರಣಕ್ಕೆ ಸೋಮವಾರ ನುಗ್ಗಲು ಯತ್ನಿಸಿದ ಶ್ರೀರಾಮ ಸೇನೆಯ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಮಠದ ಜಾತ್ರೆಯಲ್ಲಿ ಅನ್ಯ ಧರ್ಮ ಮತ್ತು ಇತರ ರಾಜ್ಯಗಳ ವ್ಯಾಪಾರಸ್ಥರಿಗೆ ಅವಕಾಶ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಶ್ರೀರಾಮ ಸೇನೆ ಸೋಮವಾರ ಗದಗ ಬಂದ್‌ಗೆ ಕರೆ ನೀಡಿತ್ತು. ಮಠದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮಠಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುವಲ್ಲಿ ಯಶ್ವಸಿ ಆದರು. ರಾಜು ಖಾನಪ್ಪನವರ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಡಿಆರ್ ವ್ಯಾನ್‌ನಲ್ಲಿ ಠಾಣೆಗೆ ಕರೆದೊಯ್ದರು. ಘಟನೆಯಿಂದ ಗದಗ ನಗರದ ಕೆಲವೆಡೆ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.
ಸಂದೇಶ ಹಂಚಿದವರು ವಶಕ್ಕೆ: ಬಂದ್ ಕರೆಯನ್ನು ಜಿಲ್ಲಾಡಳಿತ ನಿಷೇಧಿಸಿ, 144 ಸೆಕ್ಷನ್ ಜಾರಿ ಮಾಡಿತ್ತು. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಬೆಂಬಲಿಸಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಶ್ರೀರಾಮಸೇನೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರನ್ನು ಬೆಳಗಿನ ಜಾವ ವಶಕ್ಕೆ ಪಡೆದಿದ್ದರು.
ಮಠದ ಸುತ್ತ ಬಂದೋಬಸ್ತ್: ಮುಂಜಾಗ್ರತೆ ಕ್ರಮವಾಗಿ ನಗರದ ತೋಂಟದಾರ್ಯ ಮಠದ ಸುತ್ತಲೂ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ಇಲಾಖೆ ಎಚ್ಚರಿಕೆಯ ಕ್ರಮ ವಹಿಸಿತ್ತು. ಬೆಳಗ್ಗೆ 7ರ ಹೊತ್ತಿಗೆ ತೋಂಟದಾರ್ಯ ಮಠ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಒಬ್ಬ ಎಎಸ್‌ಪಿ, ನಾಲ್ವರು ಡಿವೈಎಸ್‌ಪಿ, 10 ಸಿಪಿಐ, 10 ಪಿಎಸ್‌ಐ, 200ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ ಎರಡು ಕೆಎಸ್‌ಆರ್‌ಪಿ ಹಾಗೂ ಆರು ಡಿಆರ್ ತುಕಡಿ ನಿಯೋಜಿಸಲಾಗಿತ್ತು.
ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಯಾವುದೇ ರೀತಿಯ ಶಾಂತಿಭಂಗ ನಡೆಯಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಶಾಂತಿಭಂಗ ಮಾಡಿದರ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬಿ.ಎಸ್. ನೇಮಗೌಡ ಎಸ್ಪಿ ಗದಗ