ಧರ್ಮ ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖ

11 5 SBD 1
ಶಹಾಬಾದ್‌ನಲ್ಲಿ ಅಸಂಖ್ಯಾತ ಜನರ ಮಧ್ಯೆ ಸಂಭ್ರಮದಿಂದ ಶ್ರೀರಾಮ ಮೂರ್ತಿಯ ಮೆರವಣಿಗೆ ನಡೆಯಿತು.
Published on

ಶಹಾಬಾದ್: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭು ವಿರಾಜಮಾನನಾಗಿದ್ದು, ವಿಶ್ವದೆಲ್ಲೆಡೆ ರಾಮನಮ ಝೇಂಕರಿಸುತ್ತಿದೆ. ದೇಶದಲ್ಲಿ ಸನಾತನ ಸಂಸ್ಕೃತಿ, ಧರ್ಮ ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಶ್ರೀರಾಮನ ಮೂರ್ತಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲೂ ಯುವಕರು ಧರ್ಮದ ಕಡೆ ವಾಲುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶಹಾಬಾದ್‌ನಲ್ಲಿನ ಶ್ರೀರಾಮನ ಉತ್ಸವ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಎಂದು ಬಣ್ಣಿಸಿದರು.

ಸಮಿತಿ ಗೌರವ ಅಧ್ಯಕ್ಷ ನರೇಂದ್ರ ಮಾತನಾಡಿ, ಲೋಕಸಭೆ ಚುನಾವಣೆ ನಿಮಿತ್ತ ಶ್ರೀರಾಮ ನವಮಿ ಉತ್ಸವ ಮುಂದೂಡಲಾಗಿತ್ತು. ಇದೀಗ ಉತ್ಸವ ಆಯೋಜಿಸಲಾಗಿದ್ದು, ಯುವಕರಲ್ಲಿ ಉತ್ಸಾಹ ಒಂದಿಷ್ಟು ಕಮ್ಮಿಯಾಗಿಲ್ಲ. ಶ್ರೀರಾಮ ಪ್ರಭುವಿನ ಸ್ಮರಣೆಗೆ ಅಸಂಖ್ಯಾತ ಭಕ್ತರು ಸೇರಿರುವುದು ಖುಷಿ ತಂದಿದೆ. ಈ ಭಕ್ತಿ ಹೀಗೆ ಮುಂದುವರಿಯಲಿ ಎಂದರು.

ಸಮಿತಿ ಅಧ್ಯಕ್ಷ ರವಿ ರಾಠೋಡ್, ಪ್ರಮುಖರಾದ ದಿವ್ಯಾ ಹಾಗರಗಿ, ಬಸವರಾಜ ಸಾತಿಹಾಳ, ಅಣವೀರ ಇಂಗಿನಶೆಟ್ಟಿ, ವಿಶ್ವರಾಧ್ಯ ಬಿರಾಳ, ಅಮೂಲ ಪೋದ್ದಾರ, ರಾಕೇಶ ಮಿಶ್ರಾ, ಚಂದ್ರಕಾಂತ ಗೊಬ್ಬುರಕರ, ಶಿವುಕುಮಾರ ಇಂಗಿನಶೆಟ್ಟಿ, ಆದಿತ್ಯ ವರ್ಮಾ, ಸಚಿನ್ ಛತ್ರಬಂದ್, ಉದಯಕುಮಾರ ನಂದಗೌಳಿ, ದಿನೇಶ ಗೌಳಿ, ಸುರೇಂದ್ರ ಗೌಳಿ, ಅರುಣ ಸಾತಿಹಾಳ, ರಾಹುಲ್ ಇತರರಿದ್ದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪಿಐ ನಟರಾಜ ಲಾಡೆ, ಚಿತ್ತಾಪುರ ಸಿಪಿಐ ವಿಜಯಕುಮಾರ ಬಾವಗಿ, ಕಾಳಗಿ ಸಿಪಿಐ ವೈ.ಎನ್.ಗುಂಡುರಾವ, ಪಿಎಸ್‌ಐ ಲಕ್ಷ್ಮಣ, ಶಿವರಾಜ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

(ಬಾಕ್ಸ್)
ಗಮನಸೆಳೆದ ಅದ್ದೂರಿ ಮೆರವಣಿಗೆ: ಶಹಾಬಾದ್‌ನಲ್ಲಿ ಶ್ರೀ ರಾಮನ ಮೂರ್ತಿ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಋತ್ವಿಜರಾದ ದಾಮೋಧರ ಭಟ್ಟ ಅವರು ಶ್ರೀರಾಮನ ೧೧ ಅಡಿ ಎತ್ತರದ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು. ಶರಣಬಸವೇಶ್ವರ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ರೈಲು ನಿಲ್ದಾಣ, ವೀರ ಸಾವರ್ಕರ್ ಮಾರ್ಗ, ಮಸೀದಿ ಚೌಕ್, ತ್ರಿಶೂಲ ಚೌಕ್, ಶ್ರೀರಾಮ ಚೌಕ್, ಶಾಸ್ತ್ರೀ ಚೌಕ್, ಸುಭಾಷ ಚೌಕ್, ವಿಪಿ ಚೌಕ್ ಮೂಲಕ ಭಾರತ ಚೌಕ್‌ನ ಹನುಮಾನ ಮಂದಿರ ತಲುಪಿ ಸಮಾರೋಪಗೊಂಡಿತು. ಮೆರವಣಿಗೆಯುದ್ದಕ್ಕೂ ಯುವಕರು ಭಗವಾ ಧ್ವಜ ಹಿಡಿದು ಕುಣಿಸಿದರು. ಜೈ ಶ್ರೀರಾಮ್, ಜೈ ಹನುಮಾನ್, ಸಿಯಾವರ್ ರಾಮಚಂದ್ರ ಕಿ ಜೈ.. ಸೇರಿ ಇನ್ನಿತರ ಘೋಷಣೆಗಳು ಮೊಳಗಿದವು. ಬಿಸಿಲನ್ನು ಲೆಕ್ಕಿಸದೆ ಅಸಂಖ್ಯಾತ ಜನರು ಹೆಜ್ಜೆಹಾಕಿದರು. ಹನುಮಾನ ಮಂದಿರದ ಬಳಿ ಯುವಕರ ಮಂಡಳಿಯಿಂದ ತಂಪಾದ ಮಜ್ಜಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net