ಜಿಲ್ಲಾದ್ಯಂತ ಶ್ರೀರಾಮನವಮಿ ಸಂಭ್ರಮ

CTD 30 Ramanavami 1-02
Published on

ಚಿತ್ರದುರ್ಗ: ಹಿಂದುಗಳ ಆರಾಧ್ಯ ದೈವ, ಮರ್ಯಾದೆ ಪುರಷೋತ್ತಮ ಶ್ರೀರಾಮನವಮಿ ಉತ್ಸವ ನಗರ ಸೇರಿ ಜಿಲ್ಲಾದ್ಯಂತ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.

ಶ್ರೀರಾಮ, ಆಂಜನೇಯ ಸ್ವಾಮಿ, ಗಣಪತಿ, ಈಶ್ವರನ ದೇಗುಲಗಳು ತಳಿರು, ತೋರಣಗಳಿಂದ ಕಂಗೊಳಿಸುತ್ತಿದ್ದವು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಆಚರಣೆಯಲ್ಲಿ ಪ್ರಮುಖ ಬೀದಿಗಳು ಕೇಸರಿ ಬಂಟಿಗ್ಸ್, ಬಾವುಟಗಳಿಂದ ರಾರಾಜಿಸಿದವು. ಶ್ರೀರಾಮನ ಭಾವಚಿತ್ರಕ್ಕೆ ಬೃಹದಾಕಾರದ ಹೂವಿನ ಹಾರವನ್ನಾಕಿ ಹಲವೆಡೆ ಅಲಂಕರಿಸಿ, ಎಡೆ ಸಮರ್ಪಿಸಿ ಪೂಜಿಸಲಾಯಿತು.

ಶ್ರೀರಾಮನವಮಿ ಅಂಗವಾಗಿ ಸ್ವಾಮಿಯ ಮೂರ್ತಿಗೆ ಶಾಸ್ತ್ರ, ಸಂಪ್ರದಾಯದಂತೆ ಗಂಗಾಪೂಜೆ ನೆರವೇರಿತು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಅದ್ದೂರಿ ಹಾಗೂ ಸರಳ ಮೆರವಣಿಗೆಗಳು ನಡೆದವು. ಯುವಕರು ಕೇಸರಿ ಬಣ್ಣ ಎರಚಿ, ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.

ಸೀತಾ ಮಾತೆ, ಲಕ್ಷ್ಮಣ, ಆಂಜನೇಯ ಸ್ವಾಮಿ ಸಮೇತ ಶ್ರೀರಾಮನ ಮೂರ್ತಿ, ಭಾವಚಿತ್ರಕ್ಕೆ ಬೆಳಗ್ಗೆ ಮೊದಲ ಮಹಾಮಂಗಳಾರತಿ ಸೇವೆ ನಂತರ ಹಲವೆಡೆ ನೆರೆದಿದ್ದ ಭಕ್ತರಿಗೆ ದೇಗುಲಗಳ ಮುಂಭಾಗ, ರಸ್ತೆಗಳಲ್ಲಿ ಪಾನಕ, ಕೋಸುಂಬರಿ, ಮಜ್ಜಿಗೆ, ಕಡಲೆಕಾಳು ಹುಸುಳಿ, ಪುಳಿಯೋಗರೆ ವಿತರಿಸಲಾಯಿತು. ಕೆಲವೆಡೆ ಅನ್ನಸಂತರ್ಪಣೆ ನಡೆಯಿತು.

ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲ ಸಮಿತಿಯಿಂದ ಶ್ರೀರಾಮನ, ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ, ನೆಹರು ನಗರದ ವೀರಾಂಜನೇಯ ಸ್ವಾಮಿ ದೇಗುಲ ಸಮಿತಿಯಿಂದ ರಾಮನ ಭಾವಚಿತ್ರ ಮೆರವಣಿಗೆ ನಡೆಯಿತು. ಎರಡೂ ಕಡೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಿಹಿನೀರು ಹೊಂಡದ ಆಂಜನೇಯ ದೇಗುಲದಲ್ಲಿ ಮುಂಜಾನೆ ವಿಶೇಷ ಪೂಜೆ ನೆರವೇರಿತು.

ಬೆಟ್ಟದ ಆಂಜನೇಯ, ತಮಟಕಲ್ಲು ಆಂಜನೇಯ, ರಂಗಯ್ಯನಬಾಗಿಲು ಪಕ್ಕದ ರಾಮಮಂದಿರ, ಆಂಜನೇಯ, ಗಣಪತಿ ದೇಗುಲ, ಆನೆಬಾಗಿಲು ಬಳಿಯ ಆಂಜನೇಯ, ಮದಕರಿನಾಯಕ ವೃತ್ತದಲ್ಲಿ ಇರುವ ರಕ್ಷಾಂಜನೇಯ, ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಠದ ಆವರಣದಲ್ಲಿರುವ ರಾಮಮಂದಿರ, ಜಿಲ್ಲಾ ಕ್ರೀಡಾಂಗಣ ರಸ್ತೆಯ ಆಂಜನೇಯ, ವಾಸವಿ ವಿದ್ಯಾಸಂಸ್ಥೆ ಸಮೀಪದ ರಾಮಮಂದಿರ, ಬರಗೇರಿ ಆಂಜನೇಯ ಸ್ವಾಮಿ ಸೇರಿ ಹಲವು ದೇಗುಲಗಳಲ್ಲಿ ಮುಂಜಾನೆಯಿಂದ ರಾತ್ರಿ 9ರವರೆಗೂ ಪೂಜಾ ಕೈಂಕರ್ಯಗಳು ನಡೆದವು.

ಜೋಗಿಮಟ್ಟಿ ರಸ್ತೆಯಲ್ಲಿ ಅದ್ದೂರಿ

ಜೋಗಿಮಟ್ಟಿ ರಸ್ತೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಶ್ರೀಏಕನಾಥೇಶ್ವರಿ, ಬರಗೇರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ಜಾತ್ರಾ ಮಹೋತ್ಸವ ಸಮಿತಿಯಿಂದ ಗುರುವಾರ ಅದ್ದೂರಿಯಾಗಿ ರಾಮನವಮಿ ಆಚರಿಸಲಾಯಿತು. ಸುತ್ತಮುತ್ತಲಿನ ಬಡಾವಣೆಯ ಜನ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಪಾನಕ, ಕೋಸುಂಬರಿ

ದೇಗುಲಗಳು ಅಷ್ಟೇ ಅಲ್ಲದೆ, ಮನೆಗಳಲ್ಲೂ ದೇವರ ಮನೆಯಲ್ಲಿನ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಡಿಯಿಂದ ತಯಾರಿಸಲಾಗಿದ್ದ ಎಡೆ ಸಮರ್ಪಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕುಟುಂಬ ಸಮೇತರಾಗಿ ಚಿತ್ರನ್ನ, ಪಲಾವ್, ಪುಳಿಯೋಗರೆ, ಪಾನಕ, ಕೋಸುಂಬರಿ ಸವಿದು ಸ್ವಾಮಿಗೆ ನಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net