

ಶ್ರೀರಂಗಪಟ್ಟಣ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಸುರಿದ ಧಾರಾಕಾರ ಮಳೆಗೆ ಪುರಸಭೆ ವ್ಯಾಪ್ತಿಯ ಗಂಜಾಂನ ವಿವಿಧೆಡೆ ಬೃಹತ್ ಮರಗಳು ಬಿದ್ದಿವೆ. ಐದಾರು ಕಡೆ ವಿದ್ಯುತ್ ಕಂಬಗಳು ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಸಂಗಮ, ಗುಂಬಸ್ ರಸ್ತೆ, ನಿಮಿಷಾಂಬ ದೇವಾಲಯದ ಬಳಿ ಮಾವಿನ ಮರ, ಅರಳಿ ಸೇರಿದಂತೆ ಹಲವು ಬೃಹತ್ ಮರಗಳು ಮಳೆ-ಗಾಳಿಗೆ ಬುಡಮೇಲಾಗಿವೆ. ವಿದ್ಯುತ್ ತಂತಿಗಳು ತುಂಡಾದ ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.ಸಮಸ್ಯೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಸೆಸ್ಕ್ ಸಿಬ್ಬಂದಿ ಸೋಮವಾರ ಕಾರ್ಯ ನಿರತರಾಗಿದ್ದು, ಮಳೆಯ ನಡುವೆಯೇ ಬಿದ್ದ ಮರಗಳ ತೆರವು ಕಾರ್ಯಾಚರಣೆ ನಡೆಸಿದರು. ನೂತನ ಕಂಬಗಳ ಅಳವಡಿಕೆಯೊಂದಿಗೆ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸಿದರು. ನಗುವನಹಳ್ಳಿ ವ್ಯಾಪ್ತಿಯ ಕಸಬಾ, ಅರಕೆರೆ, ಕೆ.ಶೆಟ್ಟಹಳ್ಳಿ, ಬೆಳಗೊಳ ಹೋಬಳಿಗಳಲ್ಲೂ ಕಂಬಗಳು ಮುರಿದು ಬಿದ್ದು ವಿದ್ಯುತ್ ಕಡಿತಗೊಂಡ ವರದಿಯಾಗಿದೆ. ಸೋಮವಾರವೂ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.