

ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶ್ರೀ ಗುರುರಾಜ ಸೇವಾ ಮಂಡಳಿ ಬುಧವಾರ ಶ್ರೀ ರಘುವಂದ್ಯ ತೀರ್ಥರ 607ನೇ ಮಧ್ಯಾರಾಧನೆ ಮಹೋತ್ಸವ ನಡೆಯಿತು.
ಮಧುಸೂದನಾಚಾರ್ ಕಡೂರು, ಕಂಪ್ಲಿಯ ಕಿಶೋರ್ ಆಚಾರ್, ಹರಿಹರದ ಸುರೇಶ್ ಆಚಾರ್, ಪ್ರಭಾಕರಪೇಟೆ, ಮಧುಸೂದನ್ ಆಚಾರ್ ಕಡೂರು ಪೌರೋಹಿತ್ಯದಲ್ಲಿ ನೈರ್ಮಲ್ಯ, ಪಂಚಾಮೃತ, ಮತ್ತು ಅಲಂಕಾರ ಕಾರ್ಯಕ್ರಮಗಳು ನಡೆದವು.
ರಾಮಸಾಗರದ ಶ್ರೀ ಗುರುರಾಜ ಸೇವಾ ಮಂಡಳಿ ಅಧ್ಯಕ್ಷ ಬಿ.ಆರ್.ಭೀಮರಾವ್ ಮಾತನಾಡಿ, ಕೂಡಲಿಮಠದ ಅಕ್ಷೋಭ್ಯ ತೀರ್ಥ ಪರಂಪರೆಯ ಶ್ರೀರಘುವಂದ್ಯ ತೀರ್ಥರು ಸಂಚರಿಸುತ್ತ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ವಿಜಯನಗರ ಕಾಲುವೆ ದಡದಲ್ಲಿ ಬೃಂದಾವನಸ್ಥರಾಗಿದ್ದರು. ಶಿಥಿಲಗೊಂಡಿದ್ದ ಬೃಂದಾವನವನ್ನು ಜೀರ್ಣೋದ್ಧಾರಗೊಳಿಸಿ ಪೂಜೆ, ಆರಾಧನೆ ಕಾರ್ಯಕ್ರಮ ನಡೆಸುತ್ತ ಬರಲಾಗಿದೆ. ಗುರುವಾರ ನಡೆಯುವ ಉತ್ತರಾರಾಧನೆ ಕಾರ್ಯಕ್ರಮದಲ್ಲಿ ಕೂಡಲಿ ಅಕ್ಷೋಭ್ಯ ಮಠದ ರಘುವಿಜಯ ತೀರ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ರಮಾ ಮದನ್, ಪಿ.ನರಸಿಂಹಮೂರ್ತಿ ಆಚಾರ್, ಆರ್.ರಾಮರಾವ್, ಎಚ್.ಪಿ.ಸುಬ್ಬಾರಾವ್, ಜೆ.ನರಸಿಂಹ ಆಚಾರ್, ಗುತ್ತಿ ಕೃಷ್ಣಾಚಾರ್ ಇತರರಿದ್ದರು.