

ಶ್ರೀರಂಗಪಟ್ಟಣ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಮತಾಂಧ ಉಗ್ರರು ಹಿಂದು ಪ್ರವಾಸಿಗರ ಮೇಲೆ ಗುಂಡಿಕ್ಕಿ ನಡೆಸಿದ ನರಮೇಧ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಜಮಾವಣೆಗೊಂಡ ವೇದಿಕೆ ಕಾರ್ಯಕರ್ತರು ಹಾಗೂ ಹೋರಾಟಗಾರರು ಹತ್ಯಾಕಾಂಡ ನಡೆಸಿದ ಮುಸ್ಲಿಂ ಭಯೋತ್ಪಾದಕರು ಹಾಗೂ ವಿಧ್ವಂಸಕ ಕೃತ್ಯಕ್ಕೆ ನೆರವಾಗುತ್ತಿರುವ ಪಾಕಿಸ್ಥಾನದ ವಿರುದ್ಧ ಸಾಲು ಸಾಲು ಘೋಷಣೆ ಕೂಗಿ ಉಗ್ರರ ಪ್ರತಿಕೃತಿಗೆ ಬೆಂಕಿ ಹಚ್ಚಿ, ಟೊಮ್ಯಾಟೋ ಹೊಡೆದು ಪ್ರತಿಭಟನೆ ನಡೆಸಿದರು. ಉಗ್ರರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್.ಜಗದೀಶ ಗೌಡ, ಪದಾಧಿಕಾರಿಗಳಾದ ಪ್ರಮೋದ್, ಧನುಷ್, ಕೆ.ಶೆಟ್ಟಹಳ್ಳಿ ಮಹೇಂದ್ರ, ಮಹಿಳಾ ನಾಯಕಿ ಛಾಯದೇವಿ, ಹೋರಾಟಗಾರ ದರಸಗುಪ್ಪೆ ಪ್ರಭಾಕರ್, ಗಂಜಾಂ ಕಮಲಮ್ಮ, ಸಾವಿತ್ರಮ್ಮ, ಜಯಮ್ಮ, ಚಿಕ್ಕ ಬೋರಮ್ಮ ಸೇರಿದಂತೆ ಇತರರು ಹಾಜರಿದ್ದರು.