

ನಾಪೋಕ್ಲು: ಕೊಡೆಗಳ ಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ಆದಿ ಶ್ರೀ ಪೊನ್ನಂಗಾಲತಮ್ಮೆ ದೇವಿಯ ಎರಡು ವರ್ಷಕೊಮ್ಮೆ ನಡೆಯುವ ಉತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.
ಅಂಜಪರವಂಡ ಕುಟುಂಬಸ್ಥರ ಮನೆಯಿಂದ ಶನಿವಾರ ಬೆಳಿಗ್ಗೆ ದೇವರ ಭಂಡಾರ ತರುವ ಮೂಲಕ ಹಬ್ಬ ಪ್ರಾರಂಭ ವಾಯಿತು. ಆನಂತರ ದೇವಾಲಯದ ಆವರಣದಲ್ಲಿ ದೇವರ ವಿಗ್ರಹವನ್ನು ಸ್ವಚ್ಛಗೊಳಿಸಿ, ತೆಂಗಿನ ಕಾಯಿ ನೀರಿನಿಂದ ಅಭಿಷೇಕ ಮಾಡಿ ಪೂಜಿಸಲಾಯಿತು. ಆನಂತರ ದೇವರಿಗೆ ಭಕ್ತರು ಹೂವಿನ ಹಾರಗಳನ್ನು ಅರ್ಪಿಸಿದರು. ಬಳಿಕ ದೇವಾಲಯದ ಸುತ್ತ ದೇವರಕೊಡೆ ಹಾಗೂ ದೇವರ ಅಲಂಕೃತ ಮೂರ್ತಿಯೊಂದಿಗೆ ಪ್ರದಕ್ಷಣೆ ಮಾಡಲಾಯಿತು.
ನೂತನ ಕೊಡೆ ಇದೇ ಸಂದರ್ಭದಲ್ಲಿ ಇಗ್ಗುತ್ತಪ್ಪ ದೇವಾಲಯದ ಬಳಿಯ ಅಮ್ಮಂಗೇರಿಯಿಂದ ಕಣಿಯ ಜನಾಂಗದವರು ವಿಶೇಷ ಮರದ ಎಲೆಯಿಂದ ನೂತನವಾಗಿ ತಯಾರಿಸಿ ಪೂಜಿಸಲ್ಪಟ್ಟ ದೇವರ ಕೊಡೆ ಯೊಂದಿಗೆ ದೇವಾಲಯದ ಸಮೀಪದ ಕತರ್ಂಡ ಕುಟುಂಬಸ್ಥರ ವಿಶಾಲವಾದ ದೇವರ ಗದ್ದೆಗೆ ಬಂದು ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.
ಈ ಸಂದರ್ಭ ಕೊಡೆಗೆ ದೇವರು ಬರುವ ದೃಶ್ಯ ನೋಡುಗರನ್ನು ಮೂಕಪ್ರೇಕ್ಷಕರನ್ನಾಗಿಸಿತು. ನಂತರ ಏತ್ತು ಪೋರಾಟ , ಕೊಡೆಯೊಂದಿಗೆ ದೇವಾಲಯಕ್ಕೆ ಬರಲಾಗಿ ಅಲ್ಲಿ ಕೊಡೆಯನ್ನು ದೇವಾಲಯದ ಮೂರು ಪ್ರದಕ್ಷಿಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನೆರೆದ ಭಕ್ತರು ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಪಡೆದುಕೊಂಡು ಪುನೀತರಾದರು. ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು ,ಆಡಳಿತ ಮಂಡಳಿಯವರು ಹಾಗೂ ಊರ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇಂದು ಭಾನುವಾರ ದೇವರ ಕುರುಂದ ಹಬ್ಬ ನಡೆಯಲಿದೆ. ದೇವರು ಬಂದವರು ತೆಂಗಿನ ಕಾಯಿಯನ್ನು ತಲೆಗೆ ಹೊಡೆದು ಕೊಳ್ಳುವ ದೃಶ್ಯ ನೊಡುಗರನ್ನು ಭಯ ಹುಟ್ಟಿಸುತ್ತದೆ.