ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಕೊಡುಗೆ ಅನನ್ಯ

ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಕೊಡುಗೆ ಅನನ್ಯ
Published on


ಎಸ್.ಲಿಂಗರಾಜು ಮಂಗಲ ಹನೂರು
ಸಾಲೂರು ಮಠ ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಲಿಂಗೈಕ್ಯ ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಕೊಡುಗೆ ಅನನ್ಯ ಎಂದು ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು.

ಮ.ಬೆಟ್ಟದ ಸಾಲೂರು ಬೃಹನ್ಮಠದ ಆವರಣದಲ್ಲಿ ಸೋಮವಾರ ಲಿಂಗೈಕ್ಯ ಶ್ರೀ ಪಟ್ಟದ ಮಹದೇವಸ್ವಾಮೀಜಿ ಅವರ 30ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಭಾವಚಿತ್ರದ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ದೇಶದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಮಠಗಳು ಪ್ರಾಚೀನ ಕಾಲದಿಂದಲೂ ತನ್ನದೇ ಆದ ವೈಶಿಷ್ಟೃತೆಯನ್ನು ಹೊಂದಿದೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಕಾಯಕ ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ವಲಿಸಲು ಪ್ರಾರಂಭಿಸಿದವು. 20ನೇ ಶತಮಾನದಲ್ಲಿ ಕಾಯಕದ ಜತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲು ಹಾಕಿದವು. ಈ ದಿಸೆಯಲ್ಲಿ ನಾಡಿನಲ್ಲಿ ಕಾಯಕ, ದಾಸೋಹ ಹಾಗೂ ಶೈಕ್ಷಣಿಕ ಪರಂಪರೆಯಲ್ಲಿ ಶ್ರೀ ಸಾಲೂರು ಮಠವು ಒಂದು. ಇಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಕಾಯಕದ ಜತೆಗೆ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಪಟ್ಟದ ಮಹದೇವ ಸ್ವಾಮೀಜಿ ಅವರ ಸೇವೆ ಅನನ್ಯ. ಇವರು ಬಾಲ್ಯದಲ್ಲಿಯೇ ಶ್ರೀ ಮಹದೇಶ್ವರರ ಪ್ರಭಾವಕ್ಕೆ ಒಳಗಾಗಿದ್ದರು. ಕನಕಪುರ ದೇಗುಲ ಮಠದಲ್ಲಿ ಶಿಕ್ಷಣ ಪಡೆದರು. ಆದರೆ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ.

ಬಳಿಕ ಗುರು ಶ್ರೀ ಮುದ್ದುವೀರ ಸ್ವಾಮೀಜಿ ಅವರ ಅಪ್ಪಣೆಯಂತೆ ಮ.ಬೆಟ್ಟಕ್ಕೆ ಬಂದು ನೆಲೆಸಿ ಸ್ವಾಮಿಯ ಪೂಜಾ ಕಾರ್ಯದ ಜತೆಗೆ ಮಠದ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗೆಯೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಗಿರಿಜನರು, ದೀನದಲಿತರು ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದರಲ್ಲದೇ ನಿರ್ಗತಿಕ ಮಕ್ಕಳಿಗೆ ವಸತಿ ಸೌಕರ್ಯವನ್ನು ಕಲ್ಪಿಸಿದ್ದರು. ಇವರು ಹಳ್ಳಿಗಳಿಗೆ ತೆರಳಿ ಧಾನ್ಯವನ್ನು ಸಂಗ್ರಹಿಸುವುದರ ಮೂಲಕ ಸಾಲೂರು ಮಠದ ಕಟ್ಟಡ ನಿರ್ಮಾಣ ಕಾರ್ಯವನ್ನು ನೆರವೇರಿಸಿದರು. ಈ ದಿಸೆಯಲ್ಲಿ ಶ್ರೀ ಮಠವು ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದ್ದು, ಕೋಟ್ಯಂತರ ಭಕ್ತರನ್ನು ಹೊಂದಿದೆ. ಹಾಗಾಗಿ, ಶ್ರೀಗಳ ಸೇವೆ ಅಪಾರ ಎಂದು ಬಣ್ಣಿಸಿದರು.

ವಿಜೃಂಭಣೆಯ ಮೆರವಣಿಗೆ
ಸಂಸ್ಮರಣೆ ಅಂಗವಾಗಿ ಮಠ ಹಾಗೂ ಶ್ರೀ ಮಹದೇವ ಸ್ವಾಮೀಜಿ ಅವರ ಗದ್ದುಗೆಯನ್ನು ವಿವಿಧ ಪುಷ್ಪ ಹಾಗೂ ತಳಿರು -ತೋರಣದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 4.30ರಲ್ಲಿ ಗದ್ದುಗೆಗೆ ಏಕವಾರು ರುದ್ರಾಭಿಷೇಕ, ಅಷ್ಟೋತ್ತರ ಸಹಿತ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಸಿಂಗರಿಸಿದ ಟ್ರಾೃಕ್ಟರ್‌ನ ಪಲ್ಲಕ್ಕಿಯಲ್ಲಿ ಭಾವಚಿತ್ರವನ್ನಿರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಾದ್ಯಮೇಳ ಹಾಗೂ ವಿವಿಧ ಕಲಾ ತಂಡದೊಂದಿಗೆ ಹೊರಟ ಮೆರವಣಿಗೆಯು ಮಾದಪ್ಪನ ದೇಗುಲ, ಅಂತರಗಂಗೆ ರಸ್ತೆ, ತಂಬಡಿಗೇರಿ ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ ಕುಣಿತ, ಡೊಳ್ಳುಕುಣಿತ, ನಂದಿಧ್ವಜ ಕಂಬ ಕುಣಿತ ಹಾಗೂ ಕಂಸಾಳೆ ನೃತ್ಯ ಮೆರವಣಿಗೆಗೆ ಮೆರುಗು ತಂದಿತು. ಮಳವಳ್ಳಿಯ ಕುಂದೂರಿನ ರಾಜಣ್ಣ ಎಂಬುವರ ಜೋಡೆತ್ತುಗಳು ಮೆರವಣಿಗೆಯಲ್ಲಿ ಸಾಗಿ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕುಣಿದು ಕುಪ್ಪಳಿಸಿದ ಭಕ್ತರು
ಮೆರವಣಿಗೆಯಲ್ಲಿ ಶ್ರೀ ಮಠದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ವೇಳೆ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ವಾದ್ಯ ಹಾಗೂ ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಭಕ್ತರು ಪಟಾಕಿ ಸಿಡಿಸಿ ಖುಷಿಪಟ್ಟರು. ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಆಗಮಿಸಿದ ಭಕ್ತರಿಗೆ ಮಠದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸುತ್ತೂರು ಶ್ರೀಗಳು ಭಾಗಿ
ಶ್ರೀಗಳ ಸಂಸ್ಮರಣೋತ್ಸವ ಅಂಗವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾಲೂರು ಬೃಹನ್ಮಠಕ್ಕೆ ಭೇಟಿ ನೀಡಿ ಶ್ರೀ ಮಹದೇವ ಸ್ವಾಮೀಜಿ ಗದ್ದುಗೆಗೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬಳಿಕ ಶ್ರೀಗಳ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬೆಳಗಾವಿ ಜಿಲ್ಲೆ ಮುರುಗೋಡಿನ ದುರುಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ದಂಡಿಗೆರೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ನೀಲಕಂಠ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಮುಡಿಗುಂಡ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ಸಾಲೂರು ಶಾಖಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ವಿವಿಧ ಮಠಾಧೀಶರು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ದೇಗುಲದ ಆಗಮಿಕ ಕರವೀರಸ್ವಾಮಿ, ಪಾರು ಪತ್ತೆದಾರರಾದ ಮಲ್ಲಿಕಾರ್ಜುನ, ಕೆ.ವಿ. ಪುಟ್ಟಪ್ಪ, ಮಠದ ಭಕ್ತರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net