ಶ್ರೀ ನಿರ್ಮಲಾನಂದ ಸ್ವಾಮಿಗಳ ಸಲಹೆ ಸ್ವಾಗತಾರ್ಹಕಾರ್ಯಪ್ಪ ನಡೆ ಖಂಡನೀಯ: ಮಹಿಳಾ ಜೆಡಿಎಸ್

PUSHPAVATHI
Published on


ಮಡಿಕೇರಿ: ಒಕ್ಕಲಿಗರ ರಕ್ಷಣೆ ಮತ್ತು ಸಮಾಜದ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮಿಗಳು ಕಾಲ್ಪನಿಕ ಪಾತ್ರಗಳ ಬಗ್ಗೆ ಚರ್ಚೆ ಬೇಡ ಎಂದು ಸಲಹೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಸ್ವಾಮೀಜಿಗಳ ಸಲಹೆಯನ್ನು ತಿರಸ್ಕರಿಸುವ ರೀತಿಯಲ್ಲಿ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪರವರು ನೀಡುತ್ತಿರುವ ಹೇಳಿಕೆ ಖಂಡನೀಯವೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಬಿ.ಪುಷ್ಪಾವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರ್ಯಪ್ಪರವರು ತಾವೇ ಸೃಷ್ಟಿಸಿದ ಉರಿಗೌಡ ಮತ್ತು ನಂಜೇಗೌಡ ಪಾತ್ರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಒಬ್ಬ ಕಲಾವಿದ ರಾಜಕೀಯ ರಹಿತವಾಗಿದ್ದರೆ ಆತನಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಬುದ್ದಿಜೀವಿ ಎಂದು ಕರೆಸಿಕೊಳ್ಳುವ ಕಾರ್ಯಪ್ಪರವರು ತಮ್ಮೊಳಗಿನ ನಂಜು ಹಾಗೂ ಉರಿಯನ್ನು ಹರಿಬಿಟ್ಟು ಒಕ್ಕಲಿಗರನ್ನು ಧಮನಿಸುವ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಒಬ್ಬ ಕಲಾವಿದ ತನ್ನ ವೃತ್ತಿ ಜೀವನದುದ್ದಕ್ಕೂ ಕಾಲ್ಪನಿಕ ಪಾತ್ರಗಳನ್ನು ರೂಪಿಸಿ, ತನ್ನೊಳಗಿನ ಅವಶ್ಯಕ ಭಾವನೆಗಳನ್ನು ಆ ಪಾತ್ರಕ್ಕೆ ತುಂಬಿ ನಾಟಕ ಪ್ರದರ್ಶನ ಮಾಡುತ್ತಾನೆ. ಆದರೆ, ಕಾರ್ಯಪ್ಪರವರು ತಮ್ಮ ಕಾಲ್ಪನಿಕ ಪಾತ್ರಗಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಸಾಮಾಜದ ಸಾಮರಸ್ಯ ಕಾಪಾಡುವ ಗೌರವಯುತ ಸ್ಥಾನದಲ್ಲಿರುವ ಪ್ರಬಲ ಒಕ್ಕಲಿಗ ಸಮುದಾಯದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ಕೂಡ ಇದರ ಪರವಾಗಿಯೇ ಮಾತನಾಡಬೇಕಿತ್ತು ಎಂದು ತಾಕೀತು ಮಾಡುವ ರೀತಿಯಲ್ಲಿ ಕಾರ್ಯಪ್ಪರವರು ಹೇಳಿಕೆ ನೀಡಿರುವುದು ಉದ್ಧಟತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.


ಶ್ರೀ ನಿರ್ಮಲಾನಂದ ಸ್ವಾಮಿಗಳು ಕಾಲ್ಪನಿಕ ಪಾತ್ರಗಳ ಬಗ್ಗೆ ಯಾವುದೇ ಚರ್ಚೆ ಬೇಡ ಎಂದಿರುವುದು ಮತ್ತು ರಾಜಕೀಯ ನಾಯಕರನ್ನು ಕರೆದು ತಿಳಿಹೇಳಿರುವುದು ಅತ್ಯಂತ ಸಮಯೋಚಿತವಾಗಿದೆ ಮತ್ತು ನಿಷ್ಪಕ್ಷಪಾತ ನಡೆಯಾಗಿದೆ. ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಸಮಾಜದಲ್ಲಿ ನಂಜು ಭಿತ್ತಿ ಉರಿ ಹಚ್ಚುವ ರಾಜಕೀಯ ಪ್ರೇರಿತ ಕೆಲಸ ಮತ್ತು ಉದ್ಧಟತನದ ಹೇಳಿಕೆಗಳನ್ನು ಕಾರ್ಯಪ್ಪರವರು ನಿಲ್ಲಿಸಬೇಕೆಂದು ಪುಷ್ಪಾವತಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net