

ನರೇಗಲ್ಲ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವವನ್ನು ಆರ್ಯವೈಶ್ಯ ಸಮಾಜದವರು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಮಾಜದ ಅಧ್ಯಕ್ಷ ರಾಮಣ್ಣ ನವಲಿ ಮಾತನಾಡಿ, ‘ಎಲ್ಲ ಸಮಾಜದವರ ಸಹಾಯ ಸಹಕಾರಗಳಿಂದ ನರೇಗಲ್ಲ ಪಟ್ಟಣದಲ್ಲಿ ಒಂದು ವರ್ಷದ ಹಿಂದೆ ಭವ್ಯ ದೇವಸ್ಥಾನವನ್ನು ನಿರ್ಮಿಸಲಾಗಿದ್ದು ಎಲ್ಲ ದೇವಾನುದೇವತೆಗಳ ಪ್ರಾಣ ಪ್ರತಿಷ್ಠಾಪನೆಯನ್ನು ಅತ್ಯಂತ ವೈಭವದಿಂದ ನೆರವೇರಿಸಲಾಗಿದೆ. ಭಕ್ತರ ಪಾಲಿಗೆ ಸುಕ್ಷೇತ್ರವಾಗಿದೆ’ ಎಂದರು.
ಉಪಾಧ್ಯಕ್ಷ ಚಂದ್ರಹಾಸ ಇಲ್ಲೂರ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆದಿವೆ. ಸುಮಂಗಲೆಯರು ಎಲ್ಲ ಹಬ್ಬ ಹರಿದಿನಗಳಲ್ಲಿ ಇಲ್ಲಿ ಸೇರಿ ಉಡಿ ತುಂಬುವುದು, ಕುಂಕುಮಾರ್ಚನೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಈ ಕಾರ್ಯಗಳು ಹೀಗೆಯೇ ಮುನ್ನಡೆಯಲಿ ಎಂದು ಆಶಿಸಿದರು.
ವೇ. ಮೂ. ವಿಶ್ವನಾಥಭಟ್ಟ ಗ್ರಾಮಪುರೋಹಿತ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳು ನಡೆದವು. ಶ್ರೀ ಕನ್ನಿಕಾ ಪರಮೇಶ್ವರಿಗೆ ಪಾಲಕೀ ಸೇವೆ ಜರುಗಿತು. ಅಶೋಕ ನವಲಿ, ರಾಜೇಂದ್ರ ದೇವರಂಗಡಿ, ಚಂದ್ರಹಾಸ ಇಂಗಳಳ್ಳಿ, ವೆಂಕಟೇಶ ಕಣವಿಹಳ್ಳಿ, ಈರಣ್ಣ ಇಲ್ಲೂರ, ಮುತ್ತಣ್ಣ ದೇವರಂಗಡಿ, ಶರಣಪ್ಪ ಬಿಜಾಪೂರ, ಮನೋಹರ ಗುಡಿಸಾಗರ, ನಾಗೇಶ ಗುಡಿಸಾಗರ, ಮಂಜುನಾಥ ನವಲಿ, ಮಹೇಶ ನವಲಿ ಇತರರಿದ್ದರು.